ಚಾಮರಾಜನಗರ: ಒಂದು ಕೊಡ್ರಯ್ಯ ಅಂದ್ರೆ ಎರಡು ಕೊಟ್ಟವ್ರೆ, ಚಾಮರಾಜನಗರ (Chamarajanagar) ವೋಲ್ಟೇಜ್ ಆದ್ರೆ, ವರುಣಾ (Varuna) ಹೈ ವೋಲ್ಟೇಜ್ ಎಂದು ಸಚಿವ ವಿ.ಸೋಮಣ್ಣ (V Somanna) ಎರಡು ಕಡೆ ಸ್ಪರ್ಧಿಸಿರುವ ಬಗ್ಗೆ ಮಾರ್ಮಿಕವಾಗಿ ನುಡಿದರು.ಚಾಮರಾಜನಗರ ತಾಲೂಕು ಕೊತ್ತಲವಾಡಿಯಲ್ಲಿ ರೋಡ್ ಶೋ (Road Show) ವೇಳೆ ಮಾತನಾಡಿದ ಅವರು, ಎರಡು ಕಡೆ ಓಡಾಡುವುದು ಸುಲಭದ ಕೆಲಸ ಅಲ್ಲ, ವರುಣಾ ಹೈವೋಲ್ಟೇಜ್ ಅಂತ ಅವ್ರು ಹೇಳ್ತಿದ್ರು, ಆದ್ರೆ ಎಂಟೇ ದಿನಕ್ಕೆ ಹೈಯು ಇಲ್ಲ ಪೈಯು ಇಲ್ಲ ಆಗಿದೆ. ಇನ್ನೊಂದು ಮೂರು, ನಾಲ್ಕು ದಿನ ಹೋದ್ರೆ ಎಲ್ಲಾ ವೋಲ್ಟೇಜ್ ಹೋಗಿ ಅವರು ಏನಾಗುತ್ತಾರೆ ಅಂತ ನೀವೇ ನೋಡಿ ಎಂದು ವ್ಯಂಗ್ಯವಾಡಿದರು.
ಗೋವಿಂದರಾಜನಗರ ತಬ್ಬಲಿ ಆಗಿದೆ, ನೂರಾರು ಜನ ಕಾರ್ಯಕರ್ತರು ಇಲ್ಲಿ ಬಂದು ಓಡಾಡುತ್ತಿದ್ದಾರೆ. ವರುಣಾದಲ್ಲಿ ಸಾವಿರಾರು ಜನರು ಬಂದು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ನಾನು ನಾಮಪತ್ರ ಹಾಕಿದ್ರೆ ಮತ್ತೆ ವೋಟ್ ಹಾಕುವುದಕ್ಕೆ ಮಾತ್ರ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಸೋಮವಾರದಿಂದ ವರುಣಾದಲ್ಲೇ ಇರುತ್ತಾರಂತೆ. ಮುಂದಿನ ಸೋಮವಾರದಿಂದ ವರುಣಾದಲ್ಲೇರುತ್ತೇನೆ, ನನ್ನ ಕೈಲಿ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ (Siddaramaiah) ಅವರ ಕುಟುಂಬ ಯಾವತ್ತೂ ರೋಡ್ಗೆ ಹೋಗಿ ಒಂದು ವೋಟ್ ಕೇಳಿರಲಿಲ್ಲ. ಈಗ ಎಲ್ಲಾ ಕಡೆ ಕೇಳ್ತಿದ್ದಾರೆ. ಎಲ್ಲಾ ಹೈ ವೋಲ್ಟೇಜ್ ಪ್ರಭಾವ ಎಂದ ಅವರು, ವರುಣಾದಲ್ಲಿ ಒಂದು ದಿನ ಅಲ್ಲ, ದಿನವೂ ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಕಿಡಿಕಾರಿದರು. ಪ್ರತಾಪ್ ಸಿಂಹರಿಂದಲೇ ಗಲಾಟೆಯಾಗ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ ಎಂದರು.