ರಾಯಚೂರು: ಶ್ರಮವಿಲ್ಲದೆ, ಕಷ್ಟಪಡದೆ, ಸುಖವಾಗಿ ನಿಂತು ನನಗಿದು ಕೊಡಿ ಎಂದರೆ ರಾಯರು ಕೊಡಲ್ಲ. ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲಾ ಕೊಡುತ್ತಾರೆ. ಎಂಎಲ್‌ಸಿ (MLC) ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ (Rajya Sabha Member) ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಹೇಳಿದ್ದಾರೆ.
ಮಂತ್ರಾಲಯದಲ್ಲಿ (Mantralayam) ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಗ್ಗೇಶ್, ಸಿಎಂ ಬೊಮ್ಮಾಯಿ, ಸಚಿವ ಶ್ರೀರಾಮುಲು, ಅಶ್ವಥ್ ನಾರಾಯಣ್ ಎಲ್ಲರಿಗೂ ಕೇಳಿದ್ದೆ. ಆದರೆ ಎಂಎಲ್‌ಸಿ ಆಗಲಿಲ್ಲ. ಅಚ್ಚರಿ ರೂಪದಲ್ಲಿ ವಾಟ್ಸಪ್ ಕಾಲ್ ಬಂತು, ರಾಜ್ಯಸಭಾ ಸದಸ್ಯನಾದೆ. ಪದವಿ ಮುಖ್ಯವಲ್ಲ. ಅದು ಬರುತ್ತದೆ, ಹೋಗುತ್ತದೆ ಆದರೆ ನಂಬಿಕೆ ಮುಖ್ಯ ಎಂದರು.
ಯಾವುದೇ ರಾಷ್ಟ್ರ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಪಡೆದ ಅನುಭವವಾಗಿದೆ. ಇದು ಪ್ರಶಸ್ತಿಯಲ್ಲ, ರಾಯರ ಆಶಿರ್ವಾದ. ಈ ತಿರುಕನ ಕನಸನ್ನು ರಾಯರು ನನಸು ಮಾಡಿದ್ದಾರೆ. ನಾನು ನನ್ನ ಪತ್ನಿಯನ್ನು ಪಡೆಯಲು ರಾಯರ ಆಶಿರ್ವಾದವೇ ಕಾರಣ ಎಂದು ಹೇಳಿದ ಜಗ್ಗೇಶ್ ತಮ್ಮ ಲವ್ ಸ್ಟೋರಿ ಹಾಗೂ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.
ಲವ್ ಮ್ಯಾರೇಜ್‌ಗೆ ಮನೆಯಲ್ಲಿ ವಿರೋಧವಿದ್ದಾಗ ಮಂತ್ರಾಲಯಕ್ಕೆ ಬಂದು ಆಶ್ರಯ ಪಡೆದಿದ್ದೆವು. ರಾಯರಲ್ಲಿ ವೃತ್ತಿ ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬೇಡಿಕೊಂಡಿದ್ದೆ. ರಾಯರಲ್ಲಿ ಬೇಡಿಕೊಂಡಂತೆ ಮಕ್ಕಳಿಗೆ ಗುರುರಾಜ್, ಯತಿರಾಜ್ ಎಂಬ ಹೆಸರು ಇಟ್ಟಿದ್ದೇನೆ ಎಂದರು.
ರಾಯರು ನಾನು ಬದುಕಿರುವವರೆಗೆ ನನ್ನ ಜೊತೆ ಇರಬೇಕು ಅಂತ ಅವರ ಹಸ್ತಾಕ್ಷರ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಶರ್ಟ್ ಎತ್ತಿ ಜನರಿಗೆ ಮೈಮೇಲಿನ ಹಚ್ಚೆಯನ್ನು ತೋರಿಸಿದರು.
ಮಂತ್ರಾಲಯಕ್ಕೆ ಏರೋಡ್ರಮ್ ತರುವುದು ನನ್ನ ಆಸೆ. ಅದು ಶೀಘ್ರದಲ್ಲಿ ಬರುವಂತೆ ಪ್ರಯತ್ನ ಮಾಡುತ್ತೇನೆ. ಮಂತ್ರಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಏರೋಡ್ರಮ್ ಅವಶ್ಯಕತೆಯಿದೆ. ಆಂಧ್ರಪ್ರದೇಶದ ಸಿಎಂ ಜೊತೆ ಮಾತುಕತೆ ಮಾಡುತ್ತಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಸಹ ಕೈಜೊಡಿಸಬೇಕು. ಯಡಿಯೂರಪ್ಪನವರು ಅನನ್ಯವಾದ ರಾಯರ ಭಕ್ತರು. ಎಲ್ಲರ ಪ್ರಯತ್ನದಿಂದ ಮಂತ್ರಾಲಯಕ್ಕೆ ಏರೋಡ್ರಮ್ ತರುತ್ತೇವೆ ಎಂದು ಜಗ್ಗೇಶ್ ಹೇಳಿದರು.