ಬಾಲಿವುಡ್ ಸಿನಿಮಾ ರಂಗದಲ್ಲಿ ಹೆಚ್ಚಿನ ನಟ, ನಟಿಯರು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆ ಅನ್ನೋದು ಗೊತ್ತೇ ಇದೆ. ಖ್ಯಾತ ನಟ ಸುಶಾಂತ್ ಸಿಂಗ್ ನಿಧನದ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಅನೇಕರ ಹೆಸರು ಕೇಳಿ ಬಂದಿತ್ತು. ಇದೀಗ ಖ್ಯಾತ ಗಾಯಕ ಹನಿ ಸಿಂಗ್ ತಮಗೆ ಡ್ರಗ್ಸ್ ಚಟ ಅಂಟಿಸಿದ್ದೇ ಬಾಲಿವುಡ್ ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಹನಿ ಸಿಂಗ್, ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶಾಲಿನಿ ತಲ್ವಾರ್ ಜೊತೆ ವಿಚ್ಛೇದನ ಪಡೆದಿದ್ದು, ಅದಕ್ಕೆ ಡ್ರಗ್ಸ್ ಚಟವೇ ಕಾರಣ ಎಂದಿದ್ದಾರೆ. ಮದುವೆ ಆದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಶಸ್ಸು ತಲೆಗೆ ಏರುತ್ತಿದ್ದಂತೆ ಕುಟುಂಬವನ್ನು ಸಂಪೂರ್ಣವಾಗಿ ನೆಗ್ಲೆಟ್ ಮಾಡಿದರು. ಇದರಿಂದ ಸಾಂಸಾರಿಕ ಜೀವನ ಚಿದ್ರ ಚಿದ್ರವಾಯಿತು.
‘ಕೆಲ ಖ್ಯಾತ ನಾಮರು ನನಗೆ ಡ್ರಗ್ ಅಡಿಕ್ಷನ್ ಮಾಡಿಸಿದರು. ನೀನು ಪಂಜಾಬಿ, ಮದ್ಯ ಸೇವನೆ ಮಾಡುತ್ತಿಯಾ. ಇದನ್ನು ಮಾಡಿ ನೋಡು ಎಂದರು. ಇದರಲ್ಲಿ ಏನಿದೆ? ಮಾಡ್ತೀನಿ ಕೊಡಿ ಎಂದು ನಶೆ ಮಾಡಿದೆ. ನಂತರ ಅದು ಅಡಿಕ್ಷನ್ ಆಯಿತು. ನಾನು ಯಾವಾಗಲೂ ನಶೆಯಲ್ಲಿ ಇರುತ್ತಿದ್ದೆ. ಏನು ಮಾಡುತ್ತಿದ್ದೆ ಅನ್ನೋದು ನನಗೆ ಗೊತ್ತಾಗುತ್ತಾ ಇರಲಿಲ್ಲ’ ಎಂದು ಹನಿ ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘2011ರಲ್ಲಿ ಮದುವೆ ಆದೆ. ನಾನು ಸದಾ ಟ್ರಾವೆಲ್ ಮಾಡುತ್ತಲೇ ಇದ್ದೆ. ಹೀಗಾಗಿ ಸಂಬಂಧ ಚೆನ್ನಾಗಿ ಇರಲಿಲ್ಲ. ಹೆಚ್ಚೆಂದರೆ 9-10 ತಿಂಗಳು ಒಟ್ಟಾಗಿ ಸಂಸಾರ ಮಾಡಿರಬಹುದು. ಆ ಬಳಿಕ ಯಶಸ್ಸು ಸಿಕ್ಕಿತು. ನಾನು ಮನೆಗೆ ಹೋಗೋದನ್ನೇ ನಿಲ್ಲಿಸಿದೆ. ನನ್ನ ತಾಯಿ, ತಂದೆ, ಪತ್ನಿ ಎಲ್ಲರನ್ನೂ ನೆಗ್ಲೆಟ್ ಮಾಡಿದೆ. ನಾನು ಅವರನ್ನು ಕೆಟ್ಟದಾಗಿ ನೋಡಿಕೊಂಡೆ’ ಎಂದು ಹನಿ ಸಿಂಗ್ ಬೇಸರ ಹೊರಹಾಕಿದ್ದಾರೆ.
‘ಅಕ್ಷಯ್ ಕುಮಾರ್ ಆಗಾಗ ಕರೆ ಮಾಡುತ್ತಿದ್ದರು. ಡಾಕ್ಟರ್ ಬಳಿ ಹೋಗುವಂತೆ ದೀಪಿಕಾ ಪಡುಕೋಣೆ ಸೂಚಿಸಿದರು. ಶಾರುಖ್ ಅವರು ಯಾವಾಗಲೂ ಫೋನ್ ಮಾಡುತ್ತಿದ್ದರು. ನನಗೆ ಮಾತನಾಡಲೂ ಆಗುತ್ತಿರಲಿಲ್ಲ. ನನ್ನ ಆರೋಗ್ಯದ ಬಗ್ಗೆ ಸದಾ ಕೇರ್ ಮಾಡುತ್ತಿದ್ದರು’ ಎಂದು ಹನಿ ಸಿಂಗ್ ಹೇಳಿಕೊಂಡಿದ್ದಾರೆ.