ಚಿಕ್ಕಬಳ್ಳಾಪುರ: ಮತದಾನಕ್ಕೆ 12 ಗಂಟೆ ಬಾಕಿ ಇರುವಾಗ ಜೆಡಿಎಸ್ನವರು ಮಾಡಿದ ರಾಜಕೀಯ ಷಡ್ಯಂತ್ರದಿಂದ ನನ್ನ ಸೋಲಾಗಿದೆ. ಕ್ಷೇತ್ರದ ಮತದಾರರು ಹಾಗೂ ರೈತರು ಯಾವುದೇ ಕಾರಣಕ್ಕೆ ಮಾಜಿ ಶಾಸಕ ಬಚ್ಚೇಗೌಡರ ಈ ಕೆಲಸವನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದವರು ಉದ್ದೇಶಪೂರ್ವಕವಾಗಿ ರಾಜಕೀಯ ಹುನ್ನಾರ ಮಾಡಿ ಕಾಂಗ್ರೆಸ್ಗೆ ಮತ ಕೊಡಿಸಿದ್ದಾರೆ. ವದಂತಿಗಳಿಗೆ ಕಿವಿಗೊಟ್ಟು ಷಡ್ಯಂತ್ರ ನಡೆಸಿದ್ದಾರೆ. ಕೆ.ಪಿ.ಬಚ್ಚೇಗೌಡರು ಮಾಡಿರುವ ಈ ಹುನ್ನಾರವನ್ನು ಚರಿತ್ರೆಯಲ್ಲಿ ಈ ಕ್ಷೇತ್ರದ ಮತದಾರರು ಮತ್ತು ರೈತರು ಕ್ಷಮಿಸುವುದಿಲ್ಲ. ದಿವಂಗತರಾಗಿರುವ ಅವರ ತಂದೆಯ ಆತ್ಮಕ್ಕೂ ಶಾಂತಿ ಸಿಗದು ಎಂದರು.
ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಹುನ್ನಾರ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದೆ. ಈ ಮೂಲಕ ಅವರ ಮತದಾರರಿಗೆ ಅವರೇ ಮೋಸ ಮಾಡಿದ್ದಾರೆ. ಈ ಹುನ್ನಾರವನ್ನು ಯಾವುದೇ ಕಾರಣಕ್ಕೂ ಮತದಾರರು ಮತ್ತು ರೈತರು ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ಗೆ ಮತ ಹಾಕುವವರ ದಿಕ್ಕು ತಪ್ಪಿಸಿ ಕಾಂಗ್ರೆಸ್ಗೆ ಮತ ಹಾಕಿಸಿದ್ದಾರೆ. ಕಟ್ಟ ಕಡೆಯಲ್ಲಿ ಆದ ಷಡ್ಯಂತ್ರದಿಂದ ನಮ್ಮ ಮುಖಂಡರು ಹೆಚ್ಚಿನ ಮತ ಹಾಕಿಸಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಜನ ಮತಹಾಕಿದ್ದಾರೆ. ಅವರಿಗೆ ನಾನು ವಿಶೇಷವಾದ ಕೃತಜ್ಞತೆಗಳನ್ನು ತಿಳಿಸುತ್ತೇನೆ. ನಮ್ಮ ನಿರೀಕ್ಷೆ 90 ಸಾವಿರ ಇತ್ತು. ಇನ್ನು 15 ಸಾವಿರ ಮತಗಳನ್ನು ತೆಗೆದುಕೊಂಡಿದ್ದರೆ ಗೆಲ್ಲಬಹುದಿತ್ತು. ಗೆಲುವು ಶಾಶ್ವತವಲ್ಲ. ಸೋಲೂ ಅಂತಿಮವಲ್ಲ. ಕ್ಷೇತ್ರದಲ್ಲಿ ನನ್ನ ಸೇವಾ ಮನೋಭಾವ ಇದೇ ರೀತಿ ಮುಂದುವರಿಯಲಿದೆ ಎಂದರು.
ನನ್ನ ಸೋಲು ಅಭಿವೃದ್ಧಿಯ ಸೋಲು. ಧೀಮಂತ ನಾಯಕರು ಇತಿಹಾಸದಲ್ಲಿ ಸೋತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇರುತ್ತೋ ಅಲ್ಲಿಯವರೆಗೂ ಧೈರ್ಯಗುಂದುವ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಾತಾವರಣ ನಿರ್ಮಾಣ ಮಾಡೋಣ. ಜೂನ್ ತಿಂಗಳಿಂದ ನಾನು ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುತ್ತೇನೆ. ಜನರ ಸಮಸ್ಯೆಗಳಿಗೆ ದನಿಯಾಗುತ್ತೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಿರುವ ಅಭ್ಯರ್ಥಿ ಈಗಿರುವ ಅಭಿವೃದ್ಧಿ ಪಥವನ್ನು ಮನ್ನಡೆಸಿಕೊಂಡು ಹೋಗಲು ಸಹಕಾರ ಕೊಡುತ್ತೇನೆ. ಆದರೆ ವಿನಾಕಾರಣ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದರೆ ಪ್ರತಿಭಟಿಸುತ್ತೇನೆ. ಈಗಾಗಲೇ ಹಲವು ಕಡೆ ದೌರ್ಜನ್ಯಗಳು ನಡೆಯುತ್ತಿದ್ದು ಇದನ್ನು ಸಹಿಸಲ್ಲ ಎಂದರು.