ನವದೆಹಲಿ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ‘ಟ್ರ್ಯಾಪ್’ ಮಾಡಲು ಮತ್ತು ಕಂಬಿ ಹಿಂದೆ ಹಾಕಲು ಎಲ್ಲಾ ತಂತ್ರಗಳನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಿಬಿಐ ಬಳಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾನು ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದೆ. ಇದರಿಂದ ಹೊರಬರಬೇಕೆಂದರೆ ಮೋದಿ ಹೆಸರೇಳುವಂತೆ ಕೇಳಿದ್ದರು. ಶೇಕಡಾ 90ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಸಿಬಿಐ ಮೋದಿಯವರ ಹೆಸರನ್ನು ಹೇಳುವಂತೆ ನನ್ನನ್ನು ಕೇಳುತ್ತಲೇ ಇದ್ದರು.
ಆದರೆ ಇದನ್ನು ನಾನು ನಿರಾಕರಿಸಿದ್ದೆ ಹೀಗಾಗಿ ನಾನು ಜೈಲು ಪಾಲಾಗಿದ್ದೆ ಎಂದರು. ಈ ವೇಳೆ ಸೋನಿಯಾ ಗಾಂಧಿ ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಹೀಗಿದ್ದರೂ ಬಿಜೆಪಿ ಯಾವತ್ತೂ ಈ ಬಗ್ಗೆ ಕಪ್ಪು ಕುರ್ತಾ, ಧೋತಿ ಮತ್ತು ಪೇಟ ಧರಿಸಿ ಪ್ರತಿಭಟನೆ ಮಾಡಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅನೇಕ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಸೇರಿಸಲಾಗಿತ್ತು. ನಂತರ ಮುಂಬೈ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು. ರಾಜಕೀಯ ಕಾರಣಗಳಿಗಾಗಿ ನನ್ನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಸಾಕ್ಷ್ಯಾಧಾರಗಳಿವೆ, ಅದರ ಮೇಲೆ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿವೆ ಎಂದು ಗೃಹ ಸಚಿವರು ಹೇಳಿದರು. ಕೇಜ್ರಿವಾಲ್ ಅವರು ಸ್ವಚ್ಛ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರು ದೀರ್ಘಕಾಲ ಜೈಲಿನಲ್ಲಿದ್ದಾರೆ. ಅವರು ನಿರಪರಾಧಿಗಳಾಗಿದ್ದರೆ ಜಾಮೀನು ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.