ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ತೀರ್ಪನ್ನು ಕೇಂದ್ರ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
ಜಮ್ಮು & ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆರ್ಟಿಕಲ್ 370 ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2019ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆ ನೆಲೆಸಿತು. ಹಿಂಸಾಚಾರದಿಂದಲೇ ನಲುಗಿದ್ದ ಕಣಿವೆ ಪ್ರದೇಶದಲ್ಲಿ ಆದ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥ ತಂದಿತು.
ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಸಮೃದ್ಧಿಯು ಜಮ್ಮು ಮತ್ತು ಕಾಶ್ಮೀರ, ಲಡಾಖ್ ನಿವಾಸಿಗಳ ಆದಾಯ ಮಟ್ಟ ಹೆಚ್ಚಿಸಿತು. ಇಂದು ಸುಪ್ರೀಂ ಕೋರ್ಟ್ 370ನೇ ವಿಧಿಯನ್ನು ರದ್ದುಗೊಳಿಸುವ ತೀರ್ಪು ಪ್ರಕಟಿಸಿದ್ದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರ ಸಾಂವಿಧಾನಿಕವಾಗಿದೆ ಎಂದು ಸಾಬೀತುಪಡಿಸಿದೆ ಎಂದು #NayaJammuKashmir (ಹೊಸ ಜಮ್ಮುಕಾಶ್ಮೀರ) ಹ್ಯಾಶ್ಟ್ಯಾಗ್ನೊಂದಿಗೆ ಬರೆದುಕೊಂಡಿದ್ದಾರೆ.