ಕೋಲ್ಕತಾ: ಪಾಟ್ನಾದಲ್ಲಿ ನಡೆದ ಬೃಹತ್ ವಿರೋಧ ಪಕ್ಷದ ಸಭೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ಸ್ಟ್ (ಸಿಪಿಐಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮಹಾ ವಿರೋಧ ಪಕ್ಷದ ಮೈತ್ರಿಯನ್ನು ರಚಿಸುವ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಮತ್ತು ಸಿಪಿಐಎಂನ ಕ್ರಮಗಳು ಪಶ್ಚಿಮಬಂಗಾಳದಲ್ಲಿ ಸ್ಥಾನ ತರಿಸುತ್ತಿರುವಂತಿದೆ ಎಂದು ಹೇಳಿದ್ದಾರೆ.
“ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ (ಮಹಾಜೋತ್) ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ-ಎಂ ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ ಸಂಬಂಧವನ್ನು ಮುರಿಯುತ್ತೇನೆ” ಎಂದು ಟಿಎಂಸಿ ಮುಖ್ಯಸ್ಥರು ಹೇಳಿದ್ದಾರೆ. ಸೋಮವಾರ ಕೂಚ್ ಬಿಹಾರ್ನಲ್ಲಿ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತು ಹೇಳಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬಿಜೆಪಿಯೊಂದಿಗೆ ಪರಸ್ಪರ ಒಪ್ಪಂದ ಹೊಂದಿದೆ ಎಂದು ಬ್ಯಾನರ್ಜಿ ಟೀಕಿಸಿದ್ದಾರೆ.