ಮುಂಬೈ: ನನ್ನ ಎರಡನೇ ಇನ್ನಿಂಗ್ಸ್ನಲ್ಲೂ ನಾನು ಭಾರತಕ್ಕಾಗಿ ಬ್ಯಾಟಿಂಗ್ ಮುಂದುವರಿಸುತ್ತೇನೆ ಎಂದು ಕ್ರಿಕೆಟ್ (Cricket) ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಹೇಳಿದ್ದಾರೆ. ಅವರು ಚುನಾವಣಾ ಆಯೋಗದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೀಗೆ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ಮೂರು ವರ್ಷಗಳ ಕಾಲ ಚುನಾವಣಾ ರಾಷ್ಟ್ರೀಯ ಐಕಾನ್ ಆಗಿ ಮುಂದುವರೆಯಲಿದ್ದಾರೆ.
ಭಾರತವನ್ನು ಜವಾಬ್ದಾರಿಯುತ ರಾಷ್ಟ್ರವೆಂದು ಗುರುತಿಸಿಕೊಳ್ಳಲು ಶ್ರಮಿಸಬೇಕು. ನಮ್ಮ ರಾಷ್ಟ್ರಕ್ಕೆ ಒಳ್ಳೆಯದೇ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಅದಕ್ಕೆ ಹೋಗಿ ಮತ ಹಾಕುವ ಪ್ರಯತ್ನದ ಅಗತ್ಯವಿದೆ. ಒಂದು ಮತ ಕೂಡ ದೇಶದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಹುದು. ಈ ಬಗ್ಗೆ ಎಂದಿಗೂ ಸಂದೇಹಪಡಬೇಡಿ. ಜನರು ದೇಶಕ್ಕಾಗಿ ಮತ ಚಲಾಯಿಸಬೇಕು ಎಂದು ಜಾಗೃತಿಯ ಮಾತುಗಳನ್ನಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ (Election) ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರ ಸಮ್ಮುಖದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಯುವ ಮತ್ತು ನಗರ ಭಾಗಗಳಲ್ಲಿ ಮತದಾನವನ್ನು ಹೆಚ್ಚಿಸುವಲ್ಲಿ ಸಚಿನ್ ಪ್ರಯತ್ನ ಮಾಡಿದ್ದಾರೆ.