ನವದೆಹಲಿ: ಸಾವರ್ಕರ್ ಬಗೆಗೆ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ (Rahul Gandhi) ಕ್ಷಮೆ ಯಾಚಿಸದಿದ್ದರೆ ನಾನು ಅವರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸುತ್ತೇನೆ ಎಂದು ವೀರ್ ಸಾವರ್ಕರ್ (Veer Savarkar) ಅವರ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ. ವೀರ್ ಸಾವರ್ಕರ್ ಬ್ರಿಟಿಷರ ಕ್ಷಮೆ ಯಾಚಿಸಿದರು ಎಂದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ (Congress) ಪಕ್ಷ ವೀರ್ ಸಾವರ್ಕರ್ ಅವರಿಗೆ ಅಗೌರವ ತೋರುತ್ತಿರುವುದು ಇದೇ ಮೊದಲಲ್ಲ. ಕ್ಷಮೆಯಾಚಿಸುವ ಬದಲು ಅವರು ಪುನರಾವರ್ತಿಸುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ದಾದರ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ದೂರುಗಳನ್ನು ದಾಖಲಿಸಿದ್ದೇನೆ. ಐದು ವರ್ಷಗಳ ಹಿಂದೆ ವಿಡಿ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಈ ಬಗ್ಗೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸುವಂತೆ ನ್ಯಾಯಾಲಯವು ಪೊಲೀಸ್ ಠಾಣೆಗೆ ಸೂಚಿಸಿದೆ. ಭಾರತ್ ಜೋಡೋ ಯಾತ್ರೆ (Bharat Jodo Yatre) ಯಲ್ಲಿ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ ನಂತರ ಎರಡನೇ ಪ್ರಕರಣ ದಾಖಲಿಸಿದೆ. ಈ ಬಾರಿಯೂ ನಾನು ದೂರು ನೀಡುತ್ತೇನೆ, ಸಾವರ್ಕರ್ ಅವರ ಹೆಸರನ್ನು ಮತ್ತೆ ಮತ್ತೆ ಕೆಡದಂತೆ ನಾವು ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಅದನ್ನು ನ್ಯಾಯಾಲಯಗಳ ಮೂಲಕ ಮಾಡುತ್ತೇನೆ ಎಂದರು.