ಬೆಂಗಳೂರು: ”ಆಸ್ತಿ ಸಂಪಾದನೆ ಮತ್ತಿತರ ವಿಚಾರಗಳ ಬಗ್ಗೆ ಕುಮಾರಸ್ವಾಮಿ ನನ್ನ ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣ,” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಸವಾಲು ಹಾಕಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ”ನನಗೆ ಗೌರವ ಕೊಟ್ಟರೆ ಮಾತ್ರವೇ ನಾನೂ ಗೌರವ ಕೊಡುತ್ತೇನೆ. ವೈಯಕ್ತಿಕವಾಗಿ ಆಧಾರರಹಿತ ಟೀಕೆ ಮಾಡಿದರೆ ಅದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.
”ಏನಯ್ಯಾ…, ಬಾರಯ್ಯಾ.., ಎಂದೆಲ್ಲಾ ಏಕವಚನದಲ್ಲಿ ಮಾಜಿ ಸಿಎಂ ವಿರುದ್ಧ ಹರಿಹಾಯ್ದಿದ್ದ ಡಿ.ಕೆ.ಶಿವಕುಮಾರ್, ಮಂಗಳವಾರ ಅದಕ್ಕೆ ಸಕಾರಣಗಳನ್ನು ನೀಡಿದರು. ”ಕುಮಾರಸ್ವಾಮಿಗೆ ವೈಯಕ್ತಿಕವಾಗಿ ಗೌರವ ಕೊಡುತ್ತೇನೆ. ಆದರೆ, ಬಂಡೆ ಒಡೆದ, ವಿಷ ಹಾಕಿದ, ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡ ಎಂದೆಲ್ಲಾ ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡಿದ್ದಕ್ಕೆ ನಾನೂ ಅದೇ ರೀತಿ ಉತ್ತರ ಕೊಟ್ಟಿದ್ದೇನೆ,” ಎಂದು ಹೇಳಿದರು.
”ಹೌದು.., ಒಂದು ಕಾಲದಲ್ಲಿ ನಾನು ಬಂಡೆ ಒಡೆದಿದ್ದರೆ ಅದು ನನ್ನ ಜಮೀನಿನಲ್ಲಿ ಕಾನೂನುಬದ್ಧವಾಗಿ ಒಡೆದಿದ್ದೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸಮುದಾಯದ ದೃಷ್ಟಿಯಿಂದ ನಾನು ಕುಮಾರಸ್ವಾಮಿ ಅವರಿಗೆ ಗೌರವ ಕೊಟ್ಟು ಅವರು ಏನೇ ಹೇಳುತ್ತಿದ್ದರೂ ಸಹಿಸಿಕೊಂಡು ಬಂದಿದ್ದೆ,” ಎಂದರು.