ಕೋಲಾರ : ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುವೇ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಶಾಸಕರಾದ ನಂತರ ಮೊದಲ ಬಾರಿಗೆ ನಗರದಲ್ಲಿನ ಕೋಲಾರಮ್ಮ ದೇವಾಲಯ, ಮಸೀದಿ, ಚಚ್ರ್ಗಳಿಗೆ ಅಭಿಮಾನಿಗಳೊಂದಿಗೆ ಭೇಟಿ ನೀಡಿದ ನಂತರ ನಗರ ಹೊರವಲಯದ ನಂದಿನಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಹಾಗು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿ, ವಾರದಲ್ಲಿ 6 ದಿನ ಇಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
ಗೆಲುವಿಗೆ ಸ್ರಮಿಸಿದವರಿಗೆ ಧನ್ಯವಾದ: ನಾನು ಯಾರ ಮೇಲೂ ದೂಷಣೆ ಮಾಡುವುದಿಲ್ಲ, ನಾನು ಮುಖಂಡ ಎಂದು ಭಾವಿಸಿಲ್ಲ ನಾನೂ ಒಬ್ಬ ಕಾರ್ಯಕರ್ತನಂತಿದ್ದು, ಜನರ ನಡುವೆ ಇದ್ದು ಕೆಲಸ ಮಾಡುವೆ. ನಾನು ಸೋಲುವೆ ಎಂದು ಹೇಳುತ್ತಿದ್ದರು, ಆದರೆ ಅದನ್ನೇ ನಾನು ಸವಾಲಾಗಿ ಸ್ವೀಕರಿಸಿದೆ, ನನ್ನ ಗೆಲುವಿಗೆ ಸಹಕಾರ ನೀಡಿದ ಸಿದ್ದರಾಮಯ್ಯ,
ರಮೇಶ್ಕುಮಾರ್, ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ಸಿ.ಎಂ.ಮುನಿಯಪ್ಪ, ಅನಿಲ್ಕುಮಾರ್, ನಸೀರ್ ಅಹಮದ್ ಎಲ್ಲರಿಗೂ ಧನ್ಯವಾದ ಎಂದರು. ನಾಳೆಯಿಂದ ನಾಲ್ಕು ದಿನಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತೇನೆ. ನಂತರ 25 ಪಂಚಾಯಿತಿ ಸೇರಿದಂತೆ ನಗರದ 35 ವಾರ್ಡುಗಳನ್ನು ಅಧಿಕಾರಿಗಳ ಸಮೇತ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ಕೆಲಸ ಮಾಡುತ್ತೇನೆ ಎಂದು ಕೊತ್ತೂರು ಹೇಳಿದರು.