ಕಾಂತಾರ ಸಿನಿಮಾದ ಭರ್ಜರಿ ಸಕ್ಸಸ್ ಬಳಿಕ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮೇಲೆ ರಾಜಕಾರಣಿಗಳ ಕಣ್ಣು ಬಿದ್ದಿದ್ದು, ಬಿಜೆಪಿ ಶೆಟ್ರನ್ನು ಸಂಪರ್ಕಿಸಿ, ಈ ಬಾರಿಯ ಚುನಾವಣೆಗೆ ನಿಲ್ಲುವಂತೆ ಆಹ್ವಾನ ನೀಡಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಿಷಬ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆಯೇ ತಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ರಿಷಬ್ ಹೇಳಿದ್ದರು. ಇದೀಗ ಮತ್ತೆ ರಿಷಬ್ ಈ ಕುರಿತು ಮಾತನಾಡಿದ್ದಾರೆ. ‘ಈಗಾಗಲೇ ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇಂತಹ ಗಾಸಿಪ್ ಹಬ್ಬಿಸುವವರಿಗೆ ಏನು ಹೇಳಲಿ? ನನಗೆ ನನ್ನದೇ ಆದ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿದೆ. ಸಿನಿಮಾ ಮಾಡಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರಕ್ಕೆ ಬರಲ್ಲ’ ಎಂದಿದ್ದಾರೆ.
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮತ್ತೆ ರಿಷಬ್ ಇಂಥದ್ದೇ ಮಾತುಗಳನ್ನು ಆಡಿದ್ದಾರೆ. ಹಿರಿಯ ಸಿನಿಮಾ ಪತ್ರಕರ್ತೆಯೊಬ್ಬರು ರಿಷಬ್ ಫೋಟೋವೊಂದನ್ನು ಶೇರ್ ಮಾಡಿ, ರಿಷಬ್ ರಾಜಕಾರಣಕ್ಕೆ ಬರಲಿದ್ದಾರೆ ಎಂದು ಏಪ್ರಿಲ್ ಫೂಲ್ ದಿನ ಪೋಸ್ಟ್ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಅವರು, ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. ರಿಷಬ್ ನಿರ್ಧಾರವನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.