ಬೆಂಗಳೂರು: ಬುಧವಾರ ಶಿಕ್ಷಕ ಸಂಘದ ಜೊತೆ ಚರ್ಚೆ ಮಾಡಿದ್ದೇವೆ. ಹಲವು ಸಮಸ್ಯೆ ಹೇಳಿದ್ದಾರೆ. ಸರ್ಕಾರಕ್ಕೆ ಸಮಸ್ಯೆಗಳ ಅರಿವಾಗಿದೆ. ಆದಷ್ಟು ಶೀಘ್ರವೇ ಶಿಕ್ಷಕರ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ತಮ್ಮ ಬಾಲ್ಯದ ನೆನಪು ಮಾಡಿಕೊಂಡ ಸಿಎಂ, ನನಗೆ ಶಿಕ್ಷಕರು ಕಂಡರೆ ಅಪಾರಗೌರವ ಇದೆ. ನನಗೆ ರಾಜಪ್ಪ ಮೇಷ್ಟ್ರು ಕಂಡರೆ ಇಷ್ಟ. ನಾನು 1 ರಿಂದ 4ನೇ ತರಗತಿ ಓದಿರಲಿಲ್ಲ. ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ಸೇರಿಸಿದ್ರು. ಅಂತಹ ಶಿಕ್ಷಕರು ಇರಬೇಕು ಎಂದರು.
ದೇಶದ ಎರಡನೇ ರಾಷ್ಟ್ರಾಧ್ಯಕ್ಷರಾಗಿದ್ದ ಡಾ ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಲು ಸಾಧ್ಯವಾಗಿದೆ ಅಂದರೆ, ಇದೇ ಸಾಧ್ಯತೆ ಎಲ್ಲಾ ಶಿಕ್ಷಕರಿಗೂ ಇದ್ದೇ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರೂ ರಾಧಾಕೃಷ್ಣನ್ ಅವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು ರೂಪಿಸುವವರು ನಮ್ಮ ಶಿಕ್ಷಕರು. ಇದು ಶಿಕ್ಷಕರ ಮೂಲಭೂತ ಜವಾಬ್ದಾರಿ. ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಅತೀ ಹೆಚ್ಚಾಗಿದ್ದಾರೆ. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಅನ್ನಿಸುತ್ತದೆ ಎಂದರು.
ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವಂತೆ ರೂಪಿಸುವುದೇ ಶಿಕ್ಷಕರ ಜವಾಬ್ದಾರಿ. ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಮಾತ್ರ ಅವರಿಗೆ ಸಮಾಜ ಅರ್ಥ ಆಗುತ್ತದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಾರೆ. ವಿಜ್ಞಾನ ಓದಿರುವ ವಿದ್ಯಾರ್ಥಿಗಳೂ ಮೌಡ್ಯಕ್ಕೆ ಜೋತು ಬೀಳುವುದು, ಜಾತಿ ತಾರತಮ್ಯ ಮಾಡುವುದಾದರೆ ಅವರಿಗೆ ಸಿಕ್ಕ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣದ್ದಾಗಿದೆ ಎಂದರು.