ಮೈಸೂರು: ನಮಗೆ ಬಹುಮತ ಬರೋದು ಖಚಿತವಾಗಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸರ್ವೆಗಳೂ ಅದನ್ನೇ ಹೇಳ್ತಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರೋದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆ (Assembly Election) ಮತದಾನ ಅಂತಿಮಗೊಂಡು ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಮಾತನಾಡಿದ ಸಿದ್ದರಾಮಯ್ಯ, ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು. ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ. ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು ಎಂದು ಹೇಳಿದರು.
ವರುಣಾದಲ್ಲಿ ನಾನು ಬಹಳ ಸುಲಭವಾಗಿ ಗೆಲುವು ದಾಖಲಿಸಲಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿಯಿದೆ. ಇಲ್ಲಿ ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ. ಸೋಮಣ್ಣ ಅವರಿಗೆ ವರುಣಾದ ಜನ ಯಾಕೆ ವೋಟ್ ಹಾಕಬೇಕು? ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರು ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ. ಅದು ಬಿಟ್ಟರೆ ದುಡ್ಡಿನ ರಾಜಕೀಯ ಮಾಡಿದ್ದಾರೆ. ವರುಣಾದಲ್ಲಿ ಜೆಡಿಎಸ್ನವರೆಲ್ಲರೂ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ ನಾನು ಸುಲಭವಾಗಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.