ಅಧಿಕಾರಯುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ ಎದುರು 112 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ 171 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅದ್ಭುತ ಬೌಲಿಂಗ್ ಪ್ರದರ್ಶನದ ಬಲದಿಂದ 10.3 ಓವರ್ಗಳಲ್ಲಿ 59ಕ್ಕೆ ಆಲ್ಔಟ್ ಮಾಡಿತು. ಇದು ಐಪಿಎಲ್ ಇತಿಹಾಸದ 3ನೇ ಅತ್ಯಂತ ಕಡಿಮೆ ಮೊತ್ತವಾಗಿದೆ.
ಇನಿಂಗ್ಸ್ ಮಧ್ಯದಲ್ಲಿ ಶಿಮ್ರಾನ್ ಹೆಟ್ಮಾಯೆರ್, ಸ್ಪೋಟಕ ಬ್ಯಾಟಿಂಗ್ ನಡೆಸಿ 19 ಎಸೆತಗಳಲ್ಲಿ 35 ರನ್ ಸಿಡಿಸಿದ ಪರಿಣಾಮ ರಾಜಸ್ಥಾನ್ ರಾಯಲ್ಸ್ 50 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಇಲ್ಲವಾದರೆ ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತದ ದಾಖಲೆ ಆಗಿರುವ ಆರ್ಸಿಬಿ ತಂಡದ 49 ರನ್ಗಳ ದಾಖಲೆ ಅಳಿಸಿಹೋಗುವ ಎಲ್ಲಾ ಸಾಧ್ಯತೆ ಇತ್ತು. ಆದರೆ, ಆರ್ಸಿಬಿ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪ್ರಕಾರ ಅವರೇನಾದರೂ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರೆ, ರಾಜಸ್ಥಾನ್ ರಾಯಲ್ಸ್ 40 ರನ್ಗಳ ಒಳಗೆ ಆಲ್ಔಟ್ ಆಗುತ್ತಿತ್ತು ಎಂದಿದ್ದಾರೆ.
ಪಂದ್ಯದ ಬಳಿಕ ಆರ್ಸಿಬಿ ತಂಡ ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ ಮ್ಯಾಚ್ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, “ನಾನು ಬೌಲಿಂಗ್ ಮಾಡಿದ್ರೆ, ಅವ್ರು 40 ರನ್ಗೆ ಆಲ್ ಔಟ್ ಆಗ್ತಿದ್ರು,” ಎಂದು ಹೇಳಿ ನಕ್ಕಿದ್ದಾರೆ.
ಅಂದಹಾಗೆ ಐಪಿಎಲ್ ಇತಿಹಾಸ ಕೆದಕಿದರೆ, ಅದರಲ್ಲೂ ವಿರಾಟ್ ಕೊಹ್ಲಿ ಅವರ ಬೌಲಿಂಗ್ ದಾಖಲೆ ಅತ್ಯಂತ ಕಳಪೆಯಾಗಿದೆ. 2012ರಲ್ಲಿ ಸಿಎಸ್ಕೆ ಎದುರಿನ ಪಂದ್ಯವೊಂದರಲ್ಲಿ ಇನಿಂಗ್ಸ್ನ 19ನೇ ಓವರ್ ಎಸೆದಿದ್ದ ಮಧ್ಯಮ ವೇಗಿ ವಿರಾಟ್ ಕೊಹ್ಲಿ 31 ರನ್ ಹೊಡೆಸಿಕೊಂಡಿದ್ದರು. ಸಿಎಸ್ಕೆ ತಂಡದ ಸ್ಪೋಟಕ ಬ್ಯಾಟರ್ ಅಲ್ಬೀ ಮಾರ್ಕೆಲ್, ಸಾಂದರ್ಭಿಕ ಬೌಲರ್ ವಿರಾಟ್ ಕೊಹ್ಲಿ ಎದುರು 3 ಸಿಕ್ಸರ್ ಮತ್ತು 2 ಫೋರ್ನೊಂದಿಗೆ ಅಬ್ಬರಿಸಿದರು. ಹೀಗಾಗಿ ಅಂದಿನಿಂದ ಇಂದಿನವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಕೊಹ್ಲಿ ಬೌಲಿಂಗ್ ಮಾಡುವ ಮುನ್ನ 10 ಬಾರಿ ಆಲೋಚಿಸುತ್ತಾರೆ. ಅಂದಹಾಗೆ 2022ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಕೆಲ ಓವರ್ಗಳನ್ನು ಎಸೆದಿದ್ದರು. ಅದೃಷ್ಟವಶಾತ್ ಹೆಚ್ಚು ರನ್ ಹೊಡೆಸಿಕೊಂಡಿರಲಿಲ್ಲ