ಸ್ಪೇನ್ನಲ್ಲಿ (Spain) ನಿರ್ಮಾಣವಾದ C-295 ಮಿಲಿಟರಿ ವಿಮಾನವನ್ನು (Military Aircraft) ಭಾರತಕ್ಕೆ ಹಸ್ತಾಂತರಿಸಲಾಗಿದೆ. ಸ್ಪೇನ್ನಲ್ಲಿರುವ ವಾಯುಸೇನೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ವಿಮಾನವನ್ನು ಸ್ವೀಕರಿಸಿದ್ದಾರೆ. ಸೆಪ್ಟೆಂಬರ್ 25ರಂದು ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಹೊಸ ವಿಮಾನ ಲ್ಯಾಂಡಿಂಗ್ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಾಯುಸೇನೆಯ ಹಳೆಯದಾದ Avro-748 ವಿಮಾನಗಳನ್ನು ಬದಲಿಸಲು 56 C-295 ವಿಮಾನಗಳನ್ನು ಖರೀದಿಸಲು ಏರ್ಬಸ್ ಡಿಫೆನ್ಸ್ ಮತ್ತು ಸ್ಪೇನ್ನೊಂದಿಗೆ ಭಾರತವು 21,000 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. 56 ವಿಮಾನಗಳಿಗೆ ಎರಡು ದೇಶಗಳ ನಡುವೆ ಒಪ್ಪಂದ ನಡೆದಿದೆ. 16 ವಿಮಾನಗಳು ಸ್ಪೇನ್ ನಿರ್ಮಾಣ ಮಾಡಲಿದ್ದು, ಅದೇ ತಂತ್ರಜ್ಞಾನ ಬಳಸಿಕೊಂಡು 40 ವಿಮಾನಗಳನ್ನು ಗುಜರಾತ್ ವಡೋದರದಲ್ಲಿ ಉತ್ಪಾದನೆಯಾಗಲಿವೆ.
ಸಿ-295 ಒಂದು ಸಾರಿಗೆ ವಿಮಾನವಾಗಿದ್ದು ಕಡಿಮೆ ಸ್ಥಳದಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿದೆ, ಇದು ಒಂಬತ್ತು ಟನ್ ಪೇಲೋಡ್ ಅಥವಾ 71 ಸೈನಿಕರನ್ನು ಗರಿಷ್ಠ 260 ನಾಟ್ಸ್ (KTS) ವೇಗದಲ್ಲಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ವಿಮಾನದ ಸ್ಥಿರ ರೆಕ್ಕೆಗಳ ಸಹಾಯದಿಂದ ಹೆಲಿಕಾಪ್ಟರ್ಗಳಿಗೆ ಗಾಳಿಯಲ್ಲಿ ಇಂಧನ ತುಂಬಬಹುದಾಗಿದೆ. ಇದು ಅತ್ಯುತ್ತಮ ಇಂಜಿನ್ಗಳನ್ನು ಹೊಂದಿದ್ದು, 13 ಗಂಟೆ ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.