ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅಫಘಾನಿಸ್ತಾನ ತಂಡದ ಪರ ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಇತಿಹಾಸ ಬರೆದಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 7ರಂದು (ಮಂಗಳವಾರ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫಘಾನಿಸ್ತಾನ ತಂಡದ ಪರ ಮಿಂಚಿನ ಆಟವಾಡಿದ ಝದ್ರಾನ್, 143 ಎಸೆತಗಳಲ್ಲಿ 8 ಫೋರ್ ಮತ್ತು 3 ಸಿಕ್ಸರ್ಗಳೊಂದಿಗೆ ಅಜೇಯ 129 ರನ್ ಬಾರಿಸಿದರು.
ವೇಗದ ಬೌಲರ್ ಜಾಶ್ ಹೇಝಲ್ವುಡ್ ಎದುರು 44ನೇ ಓವರ್ನಲ್ಲಿ ಇಬ್ರಾಹಿಮ್ ಝದ್ರಾನ್ ಶತಕ ಬಾರಿಸಿದರು. 131 ಎಸೆತಗಳಲ್ಲೇ ಶತಕ ದಕ್ಕಿಸಿಕೊಂಡ ಝದ್ರಾನ್ ವಿಶೇಷ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2015ರ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ಎದುರು ಶಮಿಯುಲ್ಲಾ ಶಿನ್ವಾರಿ 147 ಎಸೆತಗಳಲ್ಲಿ ಬಾರಿಸಿದ್ದ 96 ರನ್ ಅಫಘಾನಿಸ್ತಾನ ಪರ ವಿಶ್ವಕಪ್ನಲ್ಲಿ ಬೆಸ್ಟ್ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಆ ದಾಖಲೆಯನ್ನು ಈಗ ಝದ್ರಾನ್ ಮುರಿದು ಹಾಕಿದ್ದಾರೆ.
ಇಬ್ರಾಹಿಮ್ ಝದ್ರಾನ್, ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 87 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅಫಘಾನಿಸ್ತಾನ ಪರ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಕೇವಲ 24 ಇನಿಂಗ್ಸ್ಗಳಲ್ಲಿ ಅವರು ಈ ಮೈಲುಗಲ್ಲು ಮುಟ್ಟಿದ್ದಾರೆ