ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈದ್ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಮೆಂಧಾರ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,
ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬವು 90ರ ದಶಕದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆ ಕೊನೆಯಾಗಿದೆ. ಇಲ್ಲಿನ ಯುವಕರ ಕೈಗೆ ಕಲ್ಲುಗಳ ಬದಲಾಗಿ ಲ್ಯಾಪ್ಟಾಪ್ ನೀಡಲಾಗಿದೆ ಎಂದರು.
ಅಬ್ದುಲ್ಲಾ, ಮುಫ್ತಿ , ಮತ್ತು ನೆಹರು-ಗಾಂಧಿ ಕುಟುಂಬ ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವವನ್ನು ನಿಲ್ಲಿಸಿದ್ದವು. ಈ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. 2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಇಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ 35 ವರ್ಷ ಆಳಿತು. ಭಯೋತ್ಪಾದನೆ ಹೆಚ್ಚಾಯಿತು. 40 ಸಾವಿರ ಜನರು ಹತ್ಯೆಯಾದರು. ಮೂರು ಸಾವಿರ ದಿನ ಜಮ್ಮು ಮತ್ತು ಕಾಶ್ಮೀರ ಮುಚ್ಚಿತ್ತು. ಎಂಟು ವರ್ಷಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಹೊಣೆಗಾರರು ಎಂದರು.