ಬೆಂಗಳೂರು: ನಾವು ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 77 ಸಾವಿರ ಕೋಟಿ ಹೂಡಿಕೆ ಬಂದಿರುವುದೇ ರಾಜ್ಯದ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಸರ್ಕಾರದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳಿಗೆ ರಾಜ್ಯಪಾಲರು ಕನ್ನಡಿ ಹಿಡಿದಿದ್ದಾರೆ. ಆದರೆ ಪ್ರತಿ ಪಕ್ಷ ನಾಯಕರಾದ ಆರ್.ಅಶೋಕ್ ಅವರು ರಾಜ್ಯಪಾಲರು ಮಾತಾಡಿದ್ದನ್ನು ಬಿಟ್ಟು ಅವರು ಮಾತಾಡದ್ದನ್ನೆಲ್ಲಾ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಸುಳ್ಳೇ ಆರೋಪ ಮಾಡಿದ್ದಾರೆ.
ಉಳಿದಂತೆ ಆರ್.ಅಶೋಕ್ ಅವರ ಆರೋಪ ಮತ್ತು ಸುಳ್ಳುಗಳಿಗೆ ಗೃಹ ಸಚಿವ ಪರಮೇಶ್ವರ್ ಅವರು ಈಗಾಗಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಉಳಿದದ್ದಕ್ಕೂ ಉತ್ತರ ನೀಡುತ್ತಾರೆ ಎಂದರು.
ಬಿಜೆಪಿ ಎಂದರೆ ಸುಳ್ಳು. ಸುಳ್ಳಿನ ಉತ್ಪಾದನೆಯಲ್ಲಿ ಬಿಜೆಪಿ ನಿಸ್ಸೀಮರು. ಅಭಿವೃದ್ಧಿ ಮರೆತು ಸುಳ್ಳುಗಳ ಆಸರೆ ಹೋಗಿದ್ದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದು ರಾಜ್ಯದ ಜನತೆ ಕೊಟ್ಟಿರುವ ಸರ್ಟಿಫಿಕೇಟ್ ಎಂದರು.