ಬೆಂಗಳೂರು :- ಒಂದು ವೇಳೆ ಕಾಂಗ್ರೆಸ್ ಆಮಿಷಕ್ಕೆ ಒಳಗಾದ್ರೆ ಮುಂದೆ ಹಿಂದೂಗಳ ದೇವಸ್ಥಾನ, ಮಠಗಳು ಉಳಿಯಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ ದೇವಸ್ಥಾನ, ಶೃಂಗೇರಿ ಮಠಗಳೂ ಉಳಿಯುವುದಿಲ್ಲ ಎಂದರು.
ಈಗ ಉಚಿತ ಬಸ್ಸು ಇದೆ ಎಂದು ಶೃಂಗೇರಿ, ಧರ್ಮಸ್ಥಳ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡುತ್ತಾರೆ ಎಂದು ಕಾಂಗ್ರೆಸ್ಗೆ ಮತ ಹಾಕಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರುವುದಿಲ್ಲ. ನೋಡಲು ಧರ್ಮಸ್ಥಳ ಶೃಂಗೇರಿಯೂ ಇರುವುದಿಲ್ಲ. ಅದು ವಕ್ಫ್ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು.
ವಕ್ಫ್ ಸಭೆಯ ನಡಾವಳಿಯಲ್ಲಿ ಸಿಎಂ ಸೂಚನೆ ಎಂದೇ ಉಲ್ಲೇಖಿಸಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದ್ಯಾ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಸಂಶೋಧನೆ. ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಅದಕ್ಕೂ ಮುನ್ನ ಸಾವಿರಾರು ಎಕ್ರೆ ಜಾಗವನ್ನು ವಕ್ಫ್ಗೆ ಕೊಡಲು ಈ ಹುನ್ನಾರ ನಡೆದಿದೆ. ಇವರಿಗೆ ವಕ್ಫ್ ಅದಾಲತ್ ನಡೆಸಲು ಅಧಿಕಾರ ಇಲ್ಲ, ಕಾನೂನಿನಲ್ಲೂ ಅವಕಾಶ ಇಲ್ಲ. ಇಡೀ ಸಮಸ್ಯೆಯ ಮೂಲವೇ ಈ ವಕ್ಫ್ ಅದಾಲತ್ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಅವಧಿಯಲ್ಲೂ ನೋಟಿಸ್ ಹೋಗಿದೆ. ಆದರೆ ಅದು ವಕ್ಫ್ ಬೋರ್ಡ್ನಿಂದ ಹೋಗಿದೆ. ಆದರೆ ವಕ್ಫ್ ಅದಾಲತ್ ನಡೆಸಲು ನಮ್ಮ ಸರ್ಕಾರ ಸೂಚನೆ ನೀಡಿಲ್ಲ. ಹಿಂದೆ ಅಕ್ಬರ್, ಔರಾಂಗಜೇಬ್, ಟಿಪ್ಪು ಸುಲ್ತಾನ್ ಅವಧಿಯಲ್ಲಿ ದೇವಸ್ಥಾನ ಒಡೆಯಲು ಮತ್ತು ಮತಾಂತರ ಮಾಡಲು ಟಾರ್ಗೆಟ್ ನೀಡಲಾಗಿತ್ತು. ಇದು ನಾನು ಹೇಳುತ್ತಿಲ್ಲ. ಅಂದಿನ ಇತಿಹಾಸಕಾರರೇ ಪುಸ್ತಕಗಳಲ್ಲಿ ದಾಖಲೆ ನೀಡಿದ್ದಾರೆ. ಈಗ ಅದೇ ರೀತಿಯಾಗಿ ಹಿಂದೂಗಳ ಆಸ್ತಿ ಒಡೆಯಲು ಸಿದ್ದರಾಮಯ್ಯ ಸರ್ಕಾರ ವಕ್ಫ್ ಅದಾಲತ್ ನಡೆಸಿ ಟಾರ್ಗೆಟ್ ನೀಡಿದೆ ಎಂದು ಆಕ್ರೋಶ ಹೊರಹಾಕಿದರು.