2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ಕುಮಾರ್ ಸ್ಪರ್ಧೆ ಸ್ಪರ್ಧಿಸಿದ್ದಾರೆ. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಕುಮಾರ್ ಬಂಗಾರಪ್ಪ ವಿರುದ್ಧ ಶಿವರಾಜ್ ಮಾಸ್ ಡೈಲಾಗ್ ಹೊಡೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಗೀತಾ ಶಿವರಾಜ್ಕುಮಾರ್, ಶಿವಣ್ಣ ಹಾಗೂ ಮಧು ಬಂಗಾರಪ್ಪ ವಿರುದ್ಧ ಕುಮಾರ್ ಬಂಗಾರಪ್ಪ ಕಟು ಟೀಕೆಗಳನ್ನು ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಗೀತಾ ಶಿವರಾಜ್ಕುಮಾರ್ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ ಎಂದು ಟೀಕಿಸಿದ್ದರು. ಅದಕ್ಕೆ ಶಿವಣ್ಣ ತಿರುಗೇಟು ನೀಡಿದ್ದಾರೆ.
ಗೀತಾ ಶಿವರಾಜ್ಕುಮಾರ್ ಪರ ಪ್ರಚಾರ ಮಾಡುವ ವೇಳೆ ಕುಮಾರ್ ಬಂಗಾರಪ್ಪ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜ್ಕುಮಾರ್, ಮಧು ಬಂಗಾರಪ್ಪ ಹಾಗೂ ದುನಿಯಾ ವಿಜಯ್ ಜೊತೆಯಲ್ಲಿದ್ದರು. ಈ ವೇಳೆ “ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ.” ಎಂದಿದ್ದಾರೆ.
“ಕೆಲಸ ಮಾಡಬೇಕಾದರೆ ಒಳ್ಳೆಯ ಮನಸ್ಸು ಬೇಕು. ಎಲ್ಲಿ ಬೇಕಾದರೂ ಆಕ್ಟ್ ಮಾಡಬಹುದು. ಮಾಡಬೇಕಾದ ಕಡೆ ಮಾಡಿಲ್ಲ. ಇಲ್ಲಿ ಬಂದು ಏನು ಮಾಡಬೇಕಾಗಿಲ್ಲ. ಮಾಡಬೇಕಾದಾಗ ಮಾಡಿದ್ದರೆ ಸೂಪರ್ಸ್ಟಾರ್ ಆಗುತ್ತಿದ್ದರು. ರಾಜ್ಕುಮಾರ್ ಫ್ಯಾಮಿಲಿಯಿಂದ ಯಾಕೆ ಇಷ್ಟು ಇಷ್ಟ ಪಡುತ್ತಾರೆ ಹೇಳಿ. ನಾನೇ ಇರಬಹುದು. ರಾಘುನೇ ಇರಬಹುದು, ಅಪ್ಪುನೇ ಇರಬಹುದು ಯಾಕೆ ಇಷ್ಟ ಪಡುತ್ತಾರೆ. ಮಾತಾಡಬೇಕಾದರೆ ಯೋಚನೆ ಮಾಡಬೇಕು. ಸುಮ್ಮನೆ ಮಾತಾಡೋದಲ್ಲ. ” ಎಂದು ಶಿವಣ್ಣ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವೇಳೆ ಕುಮಾರ್ ಬಂಗಾರಪ್ಪ ಮಾತುಗಳಿಂದ ತನಗೆ ತುಂಬಾ ನೋವಾಗಿದ್ದು, ಅದಕ್ಕೆ ಹೀಗೆ ಮಾತಾಡುತ್ತಿದ್ದೇನೆ ಎಂದಿದ್ದಾರೆ. “ನೀವು ನಿಲ್ಲಬೇಕಾದರೆ, ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ. ನಾನು ಮಾಮೂಲಿ ಮನುಷ್ಯನಾಗಿ ಮಾತಾಡುತ್ತಿದ್ದೇನೆ. ಶಿವರಾಜ್ಕುಮಾರ್ ಆಗಿ ಮಾತಾಡುತ್ತಿಲ್ಲ. ಇವತ್ತು ಯಾರ್ಯಾರು ಕೇಳಿಸಿಕೊಳ್ಳುತ್ತಾರೋ ಕೇಳಿಸಿಕೊಳ್ಳಲಿ. ಇವತ್ತು ಗೀತಾನ ಗಂಡನಾಗಿ ಮಾತಾಡುತ್ತಿದ್ದೇನೆ. ಅವರಿಗೆ ಮನೆಯಿಲ್ಲ. ಏನು ಮನೆ ಇದ್ದರೆ ಮಾತ್ರ ಕೆಲಸ ಮಾಡುವುದಕ್ಕೆ ಆಗುತ್ತಾ? ನಾವು ಮನೆ ಮಾಡಬೇಕಿರುವು ನಿಮ್ಮಂತಹವರ ಹೃದಯದಲ್ಲಿ. ಸುಮ್ಮನೆ ಮಾತಾಡುತ್ತಾರೆ. ನಾನು ಮಾತಾಡುತ್ತಿರಲಿಲ್ಲ ಇವತ್ತು ನೋವಾಯ್ತು ನನಗೆ. ತುಂಬಾ ನೋವಾಯ್ತು. ಯಾಕಂದ್ರೆ ನಾನು ಯಾವುದೇ ವಿಷಯಕ್ಕೂ ಹೋಗುವವನಲ್ಲ.” ಎಂದಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಮನೆಯೇ ಇಲ್ಲ ಎಂದು ಟೀಕೆ ಮಾಡಿದ್ದ ಕುಮಾರ್ ಬಂಗಾರಪ್ಪಗೆ ಶಿವಣ್ಣ ಖಡಕ್ ರಿಪ್ಲೈ ಕೊಟ್ಟಿದ್ದಾರೆ. “ಮನೆ ಇದೆ. ಗೀತಾಳ ತವರು ಮನೆಯೇ ಇದು ಅಂದ್ಮೇಲೆ ಮನೆ ಇಲ್ಲದೆ ಇರುತ್ತದೆಯೇ.. ಮಾತಾಡಬೇಕಾದರೆ, ಯೋಚನೆ ಮಾಡಿ ಮಾತಾಡಬೇಕು. ಏನೇನೋ ಮಾತಾಡಿದರೆ ಹೇಗೆ? ನಾವೇನಾದರೂ ಅವರ ಬಗ್ಗೆ ಮಾತಾಡಿದ್ವಾ? ಒಂದು ಮಾತು ಆಡಿದ್ವಾ? ನಮಗೆ ಅದು ಬೇಕಾಗಿಲ್ಲ.” ಎಂದಿದ್ದಾರೆ.
ಅಲ್ಲದೆ ಪತ್ನಿ ಗೀತಾಗೆ ನಾನೇ ಗ್ಯಾರಂಟಿ ಎಂದಿದ್ದಾರೆ. “ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳು ಜನರಿಗೆ ತಲುಪಿದೆ. ಅದರ ಬಗ್ಗೆ ನಾವು ಮಾತಾಡಬೇಕು. ಈಗ ನಾನೊಂದು ಗ್ಯಾರಂಟಿ ಕೊಡುತ್ತೇನೆ. ಗೀತಾಗೆ ನಾನೇ ಗ್ಯಾರಂಟಿ. ವಿಶ್ವಾಸ ಇಡಿ ಎಂದಿದ್ದಾರೆ.