ಬೆಂಗಳೂರು:- ಹಿಂದಿನ ಸರ್ಕಾರ ಹೊರಡಿಸಿದ ತನಿಖೆ ಆದೇಶ ಹೊಸ ಸರ್ಕಾರ ಹಿಂಪಡೆಯುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕೆಲಸಗಳಿಗೆ ನಕಲಿ ಬಿಲ್ ಸಿದ್ಧಪಡಿಸಿ ಅಕ್ರಮವಾಗಿ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಗದಗ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2007ರಿಂದ 2014ರ ನಡುವೆ ನರೇಗಾ ಯೋಜನೆ ಜಾರಿಯಲ್ಲಿ ಸರ್ಕಾರಿ ಸೇವಕರು ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾಡದ ಕಾಮಗಾರಿಗಳಿಗೆ ನಕಲಿ ಬಿಲ್ ಸಿದ್ಧಪಡಿಸಿ ಹಣ ಮಂಜೂರು ಮಾಡಿದ್ದಾರೆ. ಆ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿಲ್ಲ. ಬದಲಾಗಿ ಸರ್ಕಾರ/ಸಾರ್ವಜನಿಕರ ಹಣವಾಗಿದೆ. ಆದರೆ, ಸಾರ್ವಜನಿಕರ ಹಣ ದುರುಪಯೋಗ ಮಾಡಿರುವ ಸರ್ಕಾರಿ ಸೇವಕರ ವಿರುದ್ಧ ತನಿಖೆ ಮಾಡಲು ಒಂದು ಸರ್ಕಾರ ಹೇಳಿದರೆ, ಮತ್ತೊಂದು ಸರ್ಕಾರ ತನಿಖೆ ನಡೆಸಲು ಹೊರಡಿಸಿದ್ದ ಆದೇಶವನ್ನು ಸಂತೋಷದಿಂದ ವಾಪಸ್ ಪಡೆಯುತ್ತದೆ. ಸರ್ಕಾರ ಬದಲಾದ ಕೂಡಲೇ ತನಿಖೆ ವಹಿಸಿದ ಆದೇಶಗಳನ್ನು ಹಿಂಪಡೆಯುವಂತಹ ಕಾರ್ಯದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.