ಬೆಂಗಳೂರು:- ಪಕ್ಷದ ಹಿತವೇ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಆಗ್ರಹಿಸಿದ್ದಾರೆ.
ನೀರಿನ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳನ್ನು ರಾಜ್ಯದ ಜನತೆ ಎದುರಿಸುತ್ತಿರುವಾಗ, ಅವುಗಳಿಗಿಂತಲೂ ಪಕ್ಷದ ಸಮಸ್ಯೆಯೇ ನಿಮಗೆ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿ. ಪೂರ್ಣಾವಧಿಗೆ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯಿರಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ತೆಲಂಗಾಣ ಚುನಾವಣೆಗಾಗಿ ರಾಜ್ಯವನ್ನು ಮೈಮರೆತು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ರಾಜ್ಯದ ಜಲಾಶಯಗಳನ್ನ ಬರಿದು ಮಾಡಿದ್ದಾಯ್ತು. ಈಗ ಹಿಮಾಚಲ ಪ್ರದೇಶದ ರಾಜಕೀಯ ಉಸಾಬರಿಗಾಗಿ ರಾಜ್ಯ ಬಿಟ್ಟು ಹೋದರೆ ನೀರಿಲ್ಲದೆ ಪರದಾಡುತ್ತಿರುವ ಬೆಂಗಳೂರಿನ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಯಾರು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ್ದಾರೆ.
ತಮ್ಮ ‘ಆತ್ಮಸಾಕ್ಷಿ’ಗೆ ಕನ್ನಡಿಗರ ಹಿತಕ್ಕಿಂತ ಪಕ್ಷದ ಹಿತವೇ ಮುಖ್ಯವಾದರೆ ರಾಜೀನಾಮೆ ಕೊಟ್ಟು ಪೂರ್ಣಾವಧಿ ಅಧ್ಯಕ್ಷರಾಗಿ ಪಕ್ಷದ ಕೆಲಸ ಮಾಡಿ. ಅದು ಬಿಟ್ಟು ಕೇವಲ ಅಧಿಕಾರಕ್ಕಾಗಿ ಬೆಂಗಳೂರು ಅಭಿವೃದ್ಧಿ, ನೀರಾವರಿ ಅಂತಹ ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡು ಕರ್ತವ್ಯ ವಂಚನೆ ಮಾಡಿ ಪದೇ ಪದೇ ಕನ್ನಡಿಗರಿಗೆ ದ್ರೋಹ ಮಾಡಬೇಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.