ಕನ್ನಡದ ಖ್ಯಾತ ರಿಯಾಲಿಟಿ ಶೋ ನಿರೂಪಣೆಯಿಂದ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಖತ್ ಸದ್ದು ಮಾಡಿತ್ತು. ಈ ವಿಚಾರ ಕೇಳಿ ಅನೇಕರಿಗೆ ಆಕ್ ಆಗಿತ್ತು. ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬರಲು ಕಾರಣವೇನು ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದರು. ಆದರೆ ಇದೀಗ ಸುದೀಪ್ ಅವರು ಈ ಶೋನ ತೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅವರು ಈ ಮೊದಲು ನೀಡಿದ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೇರೆ ಬೇರೆ ಭಾಷೆಗಳಲ್ಲಿ ‘ಬಿಗ್ ಬಾಸ್’ ಪ್ರಸಾರ ಕಂಡಿದೆ. ಬೇರೆ ಬೇರೆ ಹೀರೋಗಳು ಬೇರೆ ಬೇರೆ ಭಾಷೆಗಳಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಆದರೆ, ಸುದೀಪ್ ರೀತಿಯ ಸಾಧನೆಯನ್ನು ಯಾರೆಂದರೆ ಯಾರೂ ಮಾಡಿಲ್ಲ. ಸುದೀಪ್ ಅವರು ಈವರೆಗೆ 10 ಟಿವಿ ಸೀಸನ್, ಒಂದು ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್ ನಡೆಸಿಕೊಟ್ಟಿದ್ದಾರೆ. ಬೇರೆ ಭಾಷೆಗಳಲ್ಲಿ ಈ ರೀತಿಯ ಸಾಧನೆ ಆಗಿಲ್ಲ.
‘ಬಿಗ್ ಬಾಸ್ನಲ್ಲಿ ಜನರು ನನ್ನನ್ನು ನೋಡೋಕೆ ಇಷ್ಟಪಡ್ತಾರಾ, ಮಾಡ್ತೀನಿ. ಇಷ್ಟ ಇಲ್ಲವೇ ಬೇರೆ ಯಾರೂ ಹೇಳಬೇಕಿಲ್ಲ. ನನಗೆ ಹಿಂಟ್ ಬರುತ್ತದೆ. ಪ್ರತಿ ಶನಿವಾರ ಹಾಗೂ ಭಾನುವಾರ ಜನರು ನೋಡ್ತಿದಾರೆ ಎಂದರೆ ಅದನ್ನು ನಾನು ಸಂಪಾದಿಸಿಕೊಂಡು ಬಂದಿದ್ದು. ನೋಡಿ ಎಂದು ನಾನು ಬಲವಂತ ಮಾಡಿಲ್ಲ, ಹೆದರಿಸಿಲ್ಲ. ಪ್ರೀತಿಯಿಂದ ಜನರು ನೋಡುತ್ತಾ ಇದಾರೆ. ನಾನು ಕಷ್ಟಪಟ್ಟು ಮಾಡಿದ ಸಂಪಾದನೆ ಮಾಡಿದ ಆಸ್ತಿ ಅದು. ನನಗೆ ಅದು ಇರೋವರೆಗೆ ನಾನು ಮಾಡ್ತೀನೀ’ ಎಂದು ಸುದೀಪ್ ಹೇಳಿದ್ದರು.
ಕಳೆದ ಸೀಸನ್ ಬಿಗ್ ಬಾಸ್ ಸಖತ್ ಜನಪ್ರಿಯತೆ ಪಡೆಯಿತು. ಸಾಕಷ್ಟು ವಿವಾದಗಳು ನಡೆದವು. ಇವುಗಳನ್ನು ಸುದೀಪ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಸುದೀಪ್ ಅವರು ಖಡಕ್ ಆಗಿ ಪರಿಸ್ಥಿತಿಗಳನ್ನು ನಿಭಾಯಿಸಿದ್ದರು. ಈ ಮೂಲಕ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರೋಮೋಶೂಟ್ ಪೂರ್ಣಗೊಂಡಿದೆ ಎಂದು ವರದಿ ಆಗಿದೆ. ಸುದೀಪ್ ಅವರು ಹೈದರಾಬಾದ್ಗೆ ತೆರಳಿ ಅಲ್ಲಿ ಪ್ರೋಮೋಶೂಟ್ ಮಾಡಿಸಿದ್ದಾರಂತೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.