ಚಿತ್ರದುರ್ಗ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುವುದಾಗಿ ಹೇಳಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದರು, ಕೊಟ್ಟಿದ್ದಾರಾ? ಎಂದು ವಿಪಕ್ಷಗಳು ಹಾಗೂ ಕಾರ್ಯಕರ್ತರು ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy) , ಸಿದ್ಧರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಅವರು ನೀಡಿದ ‘ಗ್ಯಾರಂಟಿ’ ಹೇಳಿಕೆಗಳು ಎಲ್ಲರ ಬಳಿ ಇವೆ. 15 ಲಕ್ಷ ಬಗ್ಗೆ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ, ಕ್ಷಮೆ ಕೇಳುತ್ತೇನೆ. 15 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ ನಾರಾಯಣಸ್ವಾಮಿ, ರಾಜ್ಯದ ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ ಎಂದು ಆರೋಪಿಸಿದ್ದಾರೆ. ಜನರನ್ನು ಭಿಕ್ಷಾಟನೆ ಸರದಿಗೆ ನಿಲ್ಲಿಸಿ ಅಧಿಕಾರ ಪಡೆಯಲು ಷಡ್ಯಂತ್ರ ನಡೆಸಿದೆ. ಸ್ವತಂತ್ರ್ಯ ಹೋರಾಟಗಾರರ ಕನಸು ನುಚ್ಚುನೂರು ಮಾಡಿ, ಕಾಂಗ್ರೆಸ್ ಸಿದ್ಧಾಂತ ಗಾಳಿಗೆ ತೂರಿ ಮತದಾರರಿಗೆ ಆಮಿಷವೊಡ್ಡಿದೆ. ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ. ಸಿದ್ಧಾಂತದಿಂದ ಗೆದ್ದೆವು ಎನ್ನುವ ಎದೆಗಾರಿಕೆ ಕಾಂಗ್ರೆಸ್ ನಾಯಕರಿಗಿಲ್ಲ. ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ ಎಂದರು. ರಾಜ್ಯದ ಸಚಿವರಿಗೆ ಪ್ರಕೃತಿ ವಿಕೋಪ ಬಗ್ಗೆ ಗಮನಹರಿಸಲು ಸಮಯವಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಳೆದ 15 ದಿನಗಳಿಂದ ಗ್ಯಾರಂಟಿ ಕಾರ್ಡ್ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಗ್ಯಾರಂಟಿ ಕಾರ್ಡ್ಗಾಗಿ ಐದು ವರ್ಷದ ಸರ್ಕಾರ ಎಂಬ ಚಿಂತನೆ ಮೂಡಿದೆ ಎಂದು ಕೇಂದ್ರ ಸಚಿವರು ಟೀಕಿಸಿದ್ದಾರೆ.