ರಮೇಶ್ ಅರವಿಂದ್ ನಿರೂಪಣೆಯ ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಸಿಹಿ- ಕಹಿ ಚಂದ್ರು ಸಾಧಕರ ಸೀಟ್ ನಲ್ಲಿ ಕುಳಿತಿದ್ದರು. ಬಾಲ್ಯದಲ್ಲಿ ತಾವು ಮಾಡಿದ ತರ್ಲೆ, ತುಂಟಾಟ, ಸಿನಿಮಾ ಎಂಟ್ರಿ, ಲವ್ ಹೀಗೆ ಪ್ರತಿಯೊಂದರ ಕುರಿತು ಸಿಹಿ ಕಹಿ ಚಂದ್ರು ಅವರು ಮಾತನಾಡಿದ್ದಾರೆ. ಈ ವೇಳೆ ಶಂಕರ್ ನಾಗ್ ಜೊತೆಗಿನ ಒಡನಾಟವನ್ನು ಚಂದ್ರು ಮೆಲುಕು ಹಾಕಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶಂಕರ್ನಾಗ್ ಪರಿಚಯ ತಮಗೆ ಆಗಿದ್ದು ಹೇಗೆ? ಎಂಬುದರಿಂದ ಹಿಡಿದು ಅವರೊಂದಿಗಿನ ಸಂಪೂರ್ಣ ಒಡನಾಟವನ್ನು ಚಂದ್ರು ಸ್ಮರಿಸಿದ್ದಾರೆ. ನಾನು ಕಾಲೇಜು ಪ್ರೆಸಿಡೆಂಟ್ ಆಗಿದ್ದಾಗ ಶಂಕರ್ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಹೋಗಿದ್ದೆ. ಆಗ ಅವರು ಪುಸ್ತಕವೊಂದನ್ನು ಕೊಟ್ಟು ಓದಿಕೊಂಡು ಬಂದು ಚರ್ಚಿಸುವಂತೆ ಹೇಳಿದರು. ನನಗೆ ಅರ್ಥವಾಗದಾಗ ಅವರೇ ಅದನ್ನು ಹೇಗೆ ಓದಬೇಕು ಎಂದು ಹೇಳಿಕೊಟ್ಟರು, ಅದಾದ ಮೇಲೆ ಓದಿ ಅವರೊಟ್ಟಿಗೆ ಚರ್ಚಿಸಿದೆ. ಆಗ ಅವರು ನಮ್ಮ ಕಾಲೇಜಿಗೆ ಬರಲು ಒಪ್ಪಿಕೊಂಡು ಅತಿಥಿಯಾಗಿ ಬಂದರು ಎಂದು ಶಂಕರ್ನಾಗ್ ಅವರೊಟ್ಟಿಗಿನ ಮೊದಲ ಭೇಟಿಯನ್ನು ಸ್ಮರಿಸಿದರು. ಬಳಿಕ ನೋಡಿಸ್ವಾಮಿ ನಾವಿರೋದೆ ಹೀಗೆ ನಾಟಕದ ರಿಹರ್ಸಲ್ಗೆ ಹೋಗುತ್ತಿದ್ದರು. ಅಲ್ಲಿ ಶಂಕರ್ ನಾಗ್ ಅವರು ತಮ್ಮನ್ನು ಗುರುತಿಸಿ ‘ಮಾಲ್ಗುಡಿ ಡೇಸ್’ ತಂಡಕ್ಕೆ ಸೇರಿಸಿಕೊಂಡ ವಿಷಯ ಹೇಳಿದರು. ಆಗ ಶಂಕರ್ನಾಗ್ ಅವರು ಹೇಗೆ ಪಟ-ಪಟನೆ ಕೆಲಸ ಮಾಡುತ್ತಿದ್ದರು ಎಂಬ ವಿಚಾರವನ್ನ ಚಂದ್ರು ಬಿಚ್ಚಿಟ್ಟರು.
‘ನರಸಿಂಹ’ ಎಂಬ ಹೆಸರಿನ ಸಿನಿಮಾದಲ್ಲಿ ಶಂಕರ್ ನಾಗ್ ಜೊತೆ ನಟಿಸುತ್ತಿದ್ದೆ, ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ಎಂದು ಅವರ ಮೆಟಡೋರ್ನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದರು. ಅದಾಗಲೇ ದೊಡ್ಡ ನಟರಾಗಿದ್ದ ಅವರು ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ ನನಗೆ ಆಶ್ಚರ್ಯವಾಯಿತು ಎಂದು ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡರು.
ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್ಸ್ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಇದು ಜರ್ಮನಿಯ ತಂತ್ರಜ್ಞಾನ. ಇದನ್ನು ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೇ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ. ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿ ಸ್ಲಮ್ಗಳ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ, ಸರ್ಕಾರದಿಂದ ರಿಯಾಯಿತಿ ಸಿಕ್ಕರೆ ನಾನು ಕರ್ನಾಟಕದಲ್ಲಿರುವ ಸ್ಲಮ್ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿದ್ದರು. ಬಡವರ ಪರವಾಗಿ ಶಂಕರ್ ನಾಗ್ಗೆ ಇರುವ ಕಾಳಜಿ ಬಗ್ಗೆ ಚಂದ್ರು ವಿವರಿಸಿದರು.
ಅವರು ಅಂದು ಆಡಿದ ಆ ಮಾತು ನಾನು ಜೀವನದಲ್ಲಿ ಮರೆಯುವಂತಿಲ್ಲ, ಆಗಿನ ಕಾಲಕ್ಕೆ ಅವರದ್ದು ಅದೆಂಥ ಯೋಚನೆ, ಆ ಯೋಜನೆ ಬಂದಿದ್ದರೆ ನಿಜವಾಗಿಯೂ ನಮ್ಮದು ಗುಡಿಸಲು ಮುಕ್ತ ರಾಜ್ಯವಾಗಿಬಿಟ್ಟಿರುತ್ತಿತ್ತು. ಯಾವಾಗಲು ಲವ ಲವಿಕೆಯಿಂದಿರುತ್ತಿದ್ದ ಶಂಕರ್ ನಾಗ್ ನನ್ನ ಬದುಕಿನ ಗುರು ಎಂದು ಸಿಹಿ ಕಹಿ ಚಂದ್ರು ನೆನಪು ಮಾಡಿಕೊಂಡರು.