ಕೊಪ್ಪಳ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಾದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಪಕ್ಷವಾದ ಕೆಆರ್ ಪಿಪಿ ಪಕ್ಷವು ಬೆಂಬಲ ಘೋಷಿಸಲಿದೆ ಎಂದು ಕೆಆರ್ ಪಿಪಿ ಸಂಸ್ಥಾಪಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ. ಗಂಗಾವತಿಯಲ್ಲಿ ಮತ ಚಲಾಯಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದರು.
“ಫಲಿತಾಂಶದ ನಂತರ ಕೆಆರ್ಪಿಪಿ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬೇಕಾದ ಅವಶ್ಯಕತೆ ಇದ್ದು, ಕಾಂಗ್ರೆಸ್ ಪಕ್ಷ ಬೆಂಬಲಿಸಿಲು ಕೇಳಿದರೆ, ಸಿದ್ದರಾಮಯ್ಯ ಸಿಎಂ ಆಗುವ ಸಂದರ್ಭ ಏನಾದರೂ ಇದ್ದರೇ ಖಂಡಿತವಾಗಿ ಬೆಂಬಲ ಸೂಚಿಸುತ್ತೇನೆ’’ ಎಂದು ಹೇಳಿದರು.
ಅಚ್ಚರಿಯೆಂದರೆ, ಹಿಂದೆ 2012ರ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಸಿದ್ದರಾಮಯ್ಯ ಹಾಗೂ ಗಾಲಿ ಜನಾರ್ದನ ರೆಡ್ಡಿಯವರಿಗೆ ಸದನದಲ್ಲಿ ಭಾರೀ ಮಾತಿನ ಚಕಮಕಿ ನಡೆದಿತ್ತು. ಆಗ, ಜನಾರ್ದನ ರೆಡ್ಡಿಯವರು ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಬಳ್ಳಾರಿಗೆ ಬಂದು ಕಾಂಗ್ರೆಸ್ ಸಮಾವೇಶ ಮಾಡಿ ಎಂದು ಸವಾಲು ಹಾಕಿದ್ದರು. ಇದನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ರೆಡ್ಡಿಯವರ ಸವಾಲಿಗೆ ಸಿದ್ದರಾಮಯ್ಯನವರು ಸದನದಲ್ಲೇ ಸೆಡ್ಡು ಹೊಡೆದು ನಾವು (ಕಾಂಗ್ರೆಸ್) ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಪ್ರತಿಸವಾಲು ಹಾಕಿದ್ದರು.
ಅದರಂತೆ, ಸಿದ್ದರಾಮಯ್ಯ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆಯನ್ನು ನಡೆಸಿ, ಆ ಭಾಗದ ಕಾಂಗ್ರೆಸ್ಸನ್ನು ಒಗ್ಗೂಡಿಸಿ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಿದ್ದರು. ಇದು 2013ರ ಚುನಾವಣೆ ಮೇಲೆ ಪರಿಣಾಮ ಬೀರಿ, ಆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಆದರೆ, ಈಗ ಜನಾರ್ದನ ರೆಡ್ಡಿಯವರು ಸಿದ್ದರಾಮಯ್ಯನವರಿಗೆ ಜೈ ಎಂದಿದ್ದಾರೆ.
ಬಳ್ಳಾರಿ ನಗರದಲ್ಲಿ ಕೆಆರ್ಪಿಪಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಸಹಾಯ ಗೆಲುವು ಸಾಧಿಸಲಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಯಾರೂ ಸ್ಪರ್ಧಿಯಲ್ಲ ಎಂದರು. ಕೆಆರ್ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ರಾಜೇಶರೆಡ್ಡಿ ಸೇರಿದಂತೆ ಕಾರ್ಯಕರ್ತರು ಇದ್ಧರು.