ಮೈಸೂರು : ಗ್ಯಾರಂಟಿ ಯೋಜನೆಗಳ ಫಲ ಜನರಿಗೆ ತಲುಪಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು. ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ”ಈ ವಿಚಾರದಲ್ಲಿ ತೋರುವ ಅಸಡ್ಡೆ ಮತ್ತು ಉದಾಸೀನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಸರಕಾರ ವರ್ಷಕ್ಕೆ ಸುಮಾರು 56 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸುತ್ತಿದೆ.
ಇಷ್ಟೂ ಹಣ ಜನರಿಗೆ ತಲುಪುವಂತೆ ಮಾಡಬೇಕು ಎಂದು ಸೂಚಿಸಿದರು. ದಸರಾ ನೆಪದಲ್ಲಿ ಇತರ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಅಂತಹ ಅಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆ ಪಾಠ ಮಾಡಿದ ಅವರು, ಅಧಿಕಾರಿಗಳು ಜನರ ನಡುವೆ ಇದ್ದು ಕೆಲಸ ಮಾಡಬೇಕು. ಅದನ್ನು ಬಿಟ್ಟು ತಾವೇ ಸಿದ್ದ ಮಾದರಿಯ ಮಾಹಿತಿಯೊಂದನ್ನು ತಂದು ಸಭೆಗೆ ನೀಡಿದರೆ ಅದನ್ನು ನಾನು ಒಪ್ಪುವುದಿಲ್ಲ.
ಕೆಳ ಹಂತದ ಅಕಾರಿಗಳು ಡೈರಿ ಬರೆಯುವುದನ್ನು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಕಾರಿಗಳು ಪರಿಶೀಲಿಸಿ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಅಕಾರಿಗಳು ಜನಸಂಪರ್ಕ ನಡೆಸುತ್ತಲೇ ಇರಬೇಕು. ನೀವು ಜನರ ಮಧ್ಯೆ ಇದ್ದು ಕೆಲಸ ಮಾಡಿದಾಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ ” ಎಂದು ಹೇಳಿದರು.