ನವದೆಹಲಿ ;- ತಕ್ಷಣ ಲೋಕಸಭೆ ಚುನಾವಣೆ ನಡೆದರೆ ಯಾವ ಪಕ್ಷ ಗೆಲ್ಲಲಿದೆ? ಯಾರು ಬಹುಮತವನ್ನು ಪಡೆಯಲಿದ್ದಾರೆ ಅನ್ನೋ ಮಾಹಿತಿ ಸಮೀಕ್ಷೆಯಿಂದ ರಿವೀಲ್ ಆಗಿದೆ.
ಹಾಗಾದರೆ ಪಿಎಂ ಮೋದಿ ನೇತೃತ್ವದ ಎನ್ಡಿಎ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ? ಇಲ್ಲ ಸೋಲುತ್ತಾ? ಬನ್ನಿ ತಿಳಿಯೋಣ.
ಯೆಸ್, 2024ರ ಲೋಕಸಭೆ ಚುನಾವಣೆ ತಕ್ಷಣ ಅಂದರೆ ಈಗಲೇ ನಡೆದರೆ, ಈಗಿನ ಸ್ಥಿತಿಯಲ್ಲಿ ಯಾವ ರಾಜ್ಯದಲ್ಲಿ ಯಾರು ಗೆಲ್ಲಲಿದ್ದಾರೆ. ಯಾರಿಗೆ ಎಷ್ಟು ಸೀಟ್ ಸಿಗಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದರಲ್ಲೂ ಇತ್ತೀಚೆಗೆ ವಿಪಕ್ಷಗಳ ನಾಯಕರು ಒಗ್ಗೂಡಿ ಹೊಸ ಒಕ್ಕೂಟ ರಚಿಸಿದ್ದರು. ಇಂಡಿಯಾ ಎಂದು ಹೊಸ ಒಕ್ಕೂಟಕ್ಕೆ ಹೆಸರು ಕೂಡ ಇಟ್ಟಿದ್ದು, ಈ ಬಾರಿ ಲೋಕಸಭೆ ಚುನಾವಣೆ ಭಾರಿ ಜಿದ್ದಾಜಿದ್ದಿಯಿಂದ ಕೂಡಿರಲಿದೆ ಎನ್ನಲಾಗಿತ್ತು. ಆದರೆ ಈಗ ಹೊರಬಿದ್ದಿರುವ ಸಮೀಕ್ಷೆ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡುತ್ತಿದ್ದು, ಆ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಅಂದಹಾಗೆ ಇತ್ತೀಚೆಗಷ್ಟೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಹಾಗೇ ಬಿಜೆಪಿಗೆ ಭಾರಿ ಅಂತರದ ಸೋಲು ಕೂಡ ಎದುರಾಗಿದೆ. ಆದರೆ ಲೋಕಸಭೆ ಚುನಾವಣೆಯ ವೇಳೆ ಏನಾಗಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಈಗಲೇ ಚುನಾವಣೆ ನಡೆದರೆ ಬಿಜೆಪಿ 20 ಸೀಟುಗಳಲ್ಲಿ ಗೆಲ್ಲಲಿದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದರೆ, ಜೆಡಿಎಸ್ ಈಗಿರುವ ಒಂದು ಸ್ಥಾನವನ್ನು ಉಳಿಸಿಕೊಳ್ಳಲಿದೆ. 2019ರಲ್ಲಿ ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ತಲಾ ಒಂದು ಸ್ಥಾನ ಗೆದ್ದಿದ್ದರು. ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ಪ್ರಕಾರ ತಕ್ಷಣ ಲೋಕಸಭೆಗೆ ಚುನಾವಣೆ ನಡೆದರೆ ಕರ್ನಾಟಕದ ಮತದಾರ ಬಿಜೆಪಿ ಪರ ನಿಲ್ಲುವ ಸೂಚನೆ ಸಿಕ್ಕಿದೆ ಎಂದು ತಿಳಿದು ಬಂದಿದೆ.