ಬೆಂಗಳೂರು: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಯಾವ ತನಿಖೆಗೆ ಬೇಕಾದರೂ ವಹಿಸಲು ಸಿದ್ಧ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ. ಹಾಗಾಗಿ, ಬೇರೆ ಪ್ರಶ್ನೆ ಉದ್ಭವಿಸದು ಎಂದು ತಿಳಿಸಿದ್ದಾರೆ.
ಕ.ರಾ.ರ.ಸಾ ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಕೆಲ ಚಾಲಕರಿಂದ ದೂರು ಕೇಳಿಬರುತ್ತಿದ್ದು, ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು. ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಡೀ ದೇಶದಲ್ಲಿ ಕೊರೊನಾ ಹೊಸ ತಳಿ ಶುರುವಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರಿಗೆ ಕೂಡಲೇ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಲಾಗಿದೆ. ಕ್ಯಾಶ್ ಕಾರ್ಡ್ ಬ್ಯಾಂಕ್ ಸೊಸೈಟಿಗಳಲ್ಲಿ ರೈತರಿಗೆ ನೀಡಿರುವ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.