ಬೆಂಗಳೂರು: ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ಮುಖಾಮುಖಿಯಾಗುವ ಮೂಲಕ 2023ರ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೆಣಸಲಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬೇಕೆಂದರೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ಶ್ರೀಲಂಕಾ, ಭಾರತ ಹಾಗೂ ಬಾಂಗ್ಲಾದೇಶ ಅತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2015 ಹಾಗೂ 2019ರ 50 ಓವರ್ಗಳ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಸೋಲುವ ಮೂಲಕ ಭಾರತ ನಿರಾಶೆ ಅನುಭವಿಸಿತ್ತು.
ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರು ಕಳೆದ ಒಂದು ವರ್ಷದಿಂದ ಏಕದಿನ ಸ್ವರೂಪದ ಬಹುತೇಕ ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಹಲವು ಸರಣಿಗಳನ್ನು ಗೆದ್ದುಕೊಟ್ಟಿದ್ದಾರೆ. ಅದರಂತೆ ಈ ಸಲ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಲು ಈ ಇಬ್ಬರೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಆರಂಭಿಕ ಆಟಗಾರರ ಜೊತೆಯಾಟ ನಿರ್ಣಾಯಕವಾಗುತ್ತದೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಮೇಲೆ ತಂಡ ಸಾಕಷ್ಟು ಅವಲಂಬಿತವಾಗಿದೆ. ಗಿಲ್ ತಂಡದ ಒಂದು ಭಾಗವಾಗಿರುತ್ತಾರೆ ಎಂಬುದನ್ನು ನಾನು ನಂಬುತ್ತೇನೆ. ಗಿಲ್ ಕೀ ಆಟಗಾರ ಆಗಿರುವ ಕಾರಣ ನೀವು ಅವರನ್ನು ಕೈ ಬಿಡಲು ಸಾಧ್ಯವೇ ಇಲ್ಲ.ತವರು ಅಂಗಳದ ಪಿಚ್ಗಳಲ್ಲಿ ಆತ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ,” ಎಂದು ಅಂದಾಜಿಸಿದ್ದಾರೆ.