ದಾವಣಗೆರೆ: ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರು ಹೇಳಿಕೆ ನೀಡಿದ ಬಳಿಕ ಈ ವಿಚಾರ ಪಕ್ಷದೊಳಗೆ ಬಹಳವಾಗಿ ಚರ್ಚೆಯಾಗುತ್ತಿದೆ. ಇದೀಗ ಶಾಸಕ ರೇಣುಚಾರ್ಯ ಅವರು ಸಹ ಈ ಬಗ್ಗೆ ಹೇಳಿಕೆ ನೀಡಿದ್ದು, ವೀರಶೈವ ಲಿಂಗಾಯಿತರನ್ನು ಸಿಎಂ ಎಂದು ಘೋಷಣೆ ಮಾಡಿದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯಿತರನ್ನು ಈ ಬಾರಿ ಸಿಎಂ ಮಾಡಬೇಕು. ಆಗ ರಾಜ್ಯದಲ್ಲಿ ಹೆಚ್ಚಿನ ಸೀಟು ಬರುತ್ತದೆ. ಸೂರ್ಯ ಚಂದ್ರ ಇರುವುದು ಎಷ್ಟೋ ಸತ್ಯವೋ ಅಷ್ಟೇ ಸತ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಬಿಜೆಪಿ ಸರಕಾರ ಎಲ್ಲ ವರ್ಗದ ಜನರಿಗೆ ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಬಿಜೆಪಿ ಅಧಿಕಾರ ನೀಡಿದೆ ಎಂದರು.
ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗುದಿಲ್ಲವೆ ಎಂಬ ಪತ್ರರ್ಕತರ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಪಕ್ಷ ಬಿಡಬಾರದಿತ್ತು. ಜನಸಂಘದಿಂದ ಬಂದವರು. ಜಗದೀಶ್ ಶೆಟ್ಟರ್ ಸ್ವಯಂಕತ ಅಪರಾಧ ಮಾಡಿಕೊಂಡಿದ್ದಾರೆ. ಆದರೆ ಅವರಿಂದ ಪಕ್ಷಕ್ಕೆ ಹಿನ್ನಡೆ ಯಾಗುವುದಿಲ್ಲ ಎಂದರು.
ಲಕ್ಷ್ಮಣ ಸವದಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಲಕ್ಷ್ಮಣ ಸವದಿಯನ್ನು ಬೆಳೆಸಿದ್ದು ಬಿಜೆಪಿ. ಲಕ್ಷ್ಮಣ ಸವದಿ ಒಬ್ಬ ಪಕ್ಷ ದ್ರೋಹಿ, ಅವರೊಬ್ಬ ಜೀರೋ. ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ ಅವರು ನಮ್ಮ ಪಕ್ಷಕ್ಕೆ ಏನು ಅಲ್ಲ ಎಂದು ಪತ್ರಕ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ವಿರುದ್ದ ಹರಿಹಾಯ್ದ ಶಾಸಕ, ಕಾಂಗ್ರೆಸ್ ನವರು ದಲಿತ ಸಿಎಂ ಎಂದು ಘೋಷಣೆ ಮಾಡಲಿ ನೋಡೋಣ. ಇತ್ತ ಸಿದ್ದರಾಮಯ್ಯ ಅತ್ತ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಲು ಪೈಪೋಟಿ ನಡೆಸುತ್ತಿದ್ದಾರೆ. ಅಂತಹದರಲ್ಲಿ ದಲಿತ ಸಿಎಂ ಎಂದು ಹೇಗೆ ಘೋಷಣೆ ಮಾಡ್ತಾರೆ? ಅಂಬೇಡ್ಕರ್ಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಿ ಸೋಲುವಂತೆ ಮಾಡಿದ್ದು ಕಾಂಗ್ರೆಸ್. ಆದರೆ ಅಂಬೇಡ್ಕರ್ಗೆ ಗೌರವ ನೀಡಿದ್ದು ಮಾತ್ರ ಬಿಜೆಪಿ ಎಂದು ಹೇಳಿದರು.