ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಧ್ವನಿಯೆತ್ತಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ.
ದುರದೃಷ್ಟವಶಾತ್ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು ಎಂದು ನಟಿ ಬರೆದುಕೊಂಡಿದ್ದಾರೆ.
ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ.
ವಿಡಿಯೋದಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ? ಎಂದು ನಟಿ ಪ್ರಶ್ನಿಸಿದ್ದಾರೆ. ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನು ಒಮ್ಮೆ ಯೋಚಿಸಿ ನೋಡಿ ಎಂದು ಹರ್ಷಿಕಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.