ನಮ್ಮ ಜೀವನದಲ್ಲಿ ನೀರು ಬಹುಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯನ ದೇಹದಲ್ಲಿ 70% ನೀರು ಇರುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲೂ ನೀರು ಬೇಕೇ ಬೇಕು. ಆದರೆ ಇತ್ತೀಚೆಗೆ ಮಾಲಿನ್ಯದಿಂದ ಜೀವಜಲ ಕಲುಷಿತವಾಗುತ್ತಿದೆ. ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿದ್ದು, ಹಲವು ಕಾಯಿಲೆಗಳು ಬರುತ್ತಿದೆ. ಹೀಗಾಗಿ ಪ್ರತಿನಿತ್ಯ ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ.
ಆರ್ಯುವೇದದಲ್ಲಿ ತಾಮ್ರ ಪಾತ್ರೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಯಾಕೆಂದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ಪಿತ್ತ, ಕಫಗಳಲ್ಲಿ ಏರುಪೇರು ಉಂಟಾಗುವುದಿಲ್ಲ. ಅದರಲ್ಲೂ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿಟ್ಟರೆ ಇನ್ನೂ ಉತ್ತಮ. ಈ ನೀರನ್ನು ಪ್ರತಿನಿತ್ಯ ಕುಡಿದರೆ ಕಫ ಕಡಿಮೆಯಾಗುತ್ತದೆ. ದೇಹದ ಅಂಗಗಳು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಲು ಈ ನೀರು ಸಹಕರಿಸುತ್ತದೆ. ಜೊತೆಗೆ ದೇಹದಲ್ಲಿ ವಿಷಕಾರಿ ಆಮ್ಲ ಹೊರಹೊಮ್ಮದಂತೆ ಇದು ತಡೆಯುತ್ತದೆ.
ನೀರನ್ನು ಸಂಗ್ರಹಿಸಲು ಬಳಸುವ ತಾಮ್ರದ ಪಾತ್ರೆಯ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಬೇಕು. ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಮಿತವಾಗಿ ಕುಡಿಯಬೇಕು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ 2 ರಿಂದ 3 ಲೋಟ ನೀರು ದೇಹಕ್ಕೆ ಬೇಕಾದ ಅಗತ್ಯ ತಾಮ್ರದ ಅಂಶವನ್ನು ಒದಗಿಸುತ್ತದೆ. ಮನುಷ್ಯ ದೇಹಕ್ಕೆ ಕೇವಲ 6 ಮಿಲಿಗ್ರಾಂ ತಾಮ್ರದ ಅಂಶ ಮಾತ್ರ ಅವಶ್ಯಕವಾಗಿರುತ್ತದೆ. ಒಂದು ವೇಳೆ ಅದಕ್ಕಂತ ಹೆಚ್ಚು ಪ್ರಮಾಣದಲ್ಲಿ ತಾಮ್ರ ನಮ್ಮ ದೇಹ ಸೇರಿದರೆ ಆರೋಗ್ಯಕ್ಕೆ ಹಾನಿಕಾರಕ. 1 ಗ್ರಾಂ ತಾಮ್ರದ ಅಂಶಕ್ಕಿಂತ ಹೆಚ್ಚು ತಾಮ್ರ ನಮ್ಮ ದೇಹ ಸೇರಿದರೆ ಕಿಡ್ನಿ ಸಮಸ್ಯೆ, ಹೊಟ್ಟೆ ನೋವು ಇನ್ನಿತರ ಸಮಸ್ಯೆಗಳು ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ತಾಮ್ರದ ಪಾತ್ರೆಯಲ್ಲಿ ನೀರು ಸೇವನೆ ಲಾಭವೇನು?
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಚರ್ಮದ ಆರೋಗ್ಯ ರಕ್ಷಣೆಯಲ್ಲಿ ತಾಮ್ರ ಬಹಳ ಸಹಕಾರಿಯಾಗಿದೆ. ತಾಮ್ರದ ಪಾತ್ರೆಗಳಲ್ಲಿ ಇಟ್ಟ ನೀರನ್ನು ಸೇವಿಸುವುದರಿಂದ ಮೆಲನಿನ್ ಉತ್ಪಾದನೆಯಾಗಿ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಹಾಗೆಯೇ ಚರ್ಮದ ಅಲರ್ಜಿ, ಮೊಡವೆಗಳು ಕೂಡ ಕಡಿಮೆಯಾಗುತ್ತದೆ.
ಕ್ಯಾನ್ಸರ್ ತಡೆಗಟ್ಟುತ್ತೆ
ತಾಮ್ರದ ಪಾತ್ರೆ ನೀರು ಸೇವಿಸಿದರೆ ದೇಹದಲ್ಲಿ ವಿಕಿರಣಗಳು ಪ್ರವೇಶಿಸಿದಂತೆ ನೋಡಿಕೊಳ್ಳುತ್ತದೆ. ಕ್ಯಾನ್ಸರ್ ರೋಗಕ್ಕೆ ಈ ವಿಕಿರಣಗಳೇ ಪ್ರಮುಖ ಕಾರಣವಾಗಿದ್ದು, ತಾಮ್ರದ ಪಾತ್ರೆ ನೀರು ವಿಕಿರಣಗಳು ದೇಹಕ್ಕೆ ಸೇರದಂತೆ ನೋಡಿಕೊಂಡು ಕಾಳಜಿ ವಹಿಸುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾ ನಾಶವಾಗುತ್ತವೆ. ಈ ನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮಗೊಳ್ಳುವಂತೆ ಮಾಡುತ್ತದೆ.
ತೂಕ ಕಡಿಮೆ ಮಾಡುತ್ತೆ
ಪ್ರತಿನಿತ್ಯ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಸೇವಿಸಿದರೆ ತೂಕವನ್ನು ಇಳಿಸಿಕೊಳ್ಳಬಹುದು. ಕೆಲವೊಮ್ಮೆ ಕಬ್ಬಿಣಾಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ತಿಂದು ಡಯಟ್ ಮಾಡಿದರೂ ತೂಕ ಕಡಿಮೆಯಾಗಲ್ಲ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ತಾಮ್ರದ ಪಾತ್ರೆಗಳಲ್ಲಿಟ್ಟ ನೀರು ಕುಡಿಯುವುದು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೆ ದೇಹದಲ್ಲಿ ಕೊಬ್ಬಿನಂಶವು ಹೆಚ್ಚಾಗದಂತೆ ತಡೆಯುತ್ತದೆ.
ಗಾಯಗಳು ಬೇಗ ವಾಸಿಯಾಗುತ್ತೆ
ತಾಮ್ರದ ಪಾತ್ರೆ ನೀರಿನಲ್ಲಿ ಬ್ಯಾಕ್ಟಿರಿಯಾ ಹಾಗೂ ವೈರಸ್ ನಾಶಪಡಿಸುವ ಶಕ್ತಿ ಇರುತ್ತದೆ. ಹೀಗಾಗಿ ಈ ನೀರು ಗಾಯಗಳು ಬೇಗನೆ ವಾಸಿಯಾಗಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಈ ನೀರು ಹೆಚ್ಚಿಸಲು ಸಹಕರಿಸುತ್ತದೆ.