ಬೆಂಗಳೂರು:- ಈಗಾಗಲೇ ನಮ್ಮ ಮೆಟ್ರೋದಲ್ಲಿ ಹಲವು ನಿಮಯಗಳಿದ್ದು, ಅದನ್ನು ಮೀರಿದವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ. ಇನ್ನು ದಂಡದ ದರವನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಹಾಕಲಾಗಿದೆ
ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳಿಗೆ ಬ್ರೇಕ್ ಹಾಕುವಂತೆ ಬಿಎಂಆರ್ಸಿಎಲ್ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಹೀಗಾಗಿ ನಮ್ಮ ಮೆಟ್ರೋ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಮಹಿಳಾ ಪ್ರಯಾಣಿಕರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಮೆಟ್ರೋ ಈ ದಂಡದ ಮೊತ್ತವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಮ್ಮ ಮೆಟ್ರೋ ಅಸಭ್ಯ ವರ್ತನೆಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು 500 ರೂಪಾಯಿ ಇದ್ದ ದಂಡವನ್ನು 10,000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ. ನಮ್ಮ ಮೆಟ್ರೋದಲ್ಲಿ ಕಿರುಕುಳ ನೀಡುವ ಕಾಮುಕರಿಗೆ ಇನ್ನುಮುಂದೆ ಬರೋಬ್ಬರಿ 10,000 ರೂಪಾಯಿ ದಂಡ ಬೀಳಲಿದೆ. ಇನ್ನು ಈ ಹಿಂದೆಯೇ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಮಹತ್ವದ ನಿರ್ಧಾರವನ್ನು ನಮ್ಮ ಮೆಟ್ರೋ ಸಂಸ್ಥೆಗೆ ಮುಂದಾಗಿತ್ತು. ಮಹಿಳೆಯರ ಸುರಕ್ಷತೆಗಾಗಿ ಈಗಿರುವ ಬೋಗಿ ಜೊತೆಗೆ ಮತ್ತೊಂದು ಬೋಗಿಯನ್ನು ಮಹಿಳೆಯರಿಗಾಗಿ ಮೀಸಲಿಡುವಂತೆ ಬಿಎಂಆರ್ಸಿಎಲ್ಗೆ ಅನೇಕ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಸ್ಥೆ ಶೀಘ್ರದಲ್ಲೇ ಮಹಿಳೆಯರಿಗೆ ಮತ್ತೊಂದು ಬೋಗಿ ಮೀಸಲಿಡಲು ಚಿಂತನೆ ನಡೆಸಿದೆ
ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಹಾಗೂ ವೇಗವಾಗಿ ಸಂಚರಿಸಲು ಜನ ನಮ್ಮ ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಎಲ್ಲಾ ಬೋಗಿಗಳು ಜನದಟ್ಟಣೆಯಿಂದ ಕೂಡಿರುತ್ತದೆ. ಇದರ ಮಧ್ಯ ಮಹಿಳೆಯರು ಸಂಚರಿಸುತ್ತಿದ್ದಾರೆ. ಈ ವೇಳೆ ಕೆಲ ಕಾಮುಕರು ಮಹಿಳೆಯರ ಮೇಲೆ ಬೀಳುವುದು, ಖಾಸಗಿ ಅಂಗಗಳನ್ನು ಮುಟ್ಟುವುದು ಸೇರಿದಂತೆ ವಿವಿಧ ರೀತಿಯಲ್ಲಿ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ಇತ್ತೀಚಿಗೆ ಬೆಳಕಿಗೆ ಬರುತ್ತಿದೆ