ನಮ್ಮ ಆಹಾರ ಸೇವನೆಯಲ್ಲಿ ಕೊಂಚ ವ್ಯತ್ಯಾಸವಾದರೂ ಅದರ ಅದು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಹೆಚ್ಚು ಸೇವಿಸದರೂ ಕಷ್ಟ, ಕಡಿಮೆ ಸೇವಿಸಿದರೂ ಕಷ್ಟ. ಹೀಗಾಗಿ ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗಿರುತ್ತದೆ.
ಆದರೂ ಕೆಲವೊಮ್ಮೆ ತಿಂದ ಆಹಾರ ಅಜೀರ್ಣವಾಗಿ ಹೊಟ್ಟೆ ನೋವು ಕಾಡಬಹುದು. ಅಜೀರ್ಣವಾದರೆ ಹೊಟ್ಟೆ ಮುರಿಯುವುದು, ವಾಕರಿಕೆಯಂತಹ ಸಮಸ್ಯೆಗಳೂ ಉಂಟಾಗುತ್ತದೆ. ಇದಕ್ಕೇನು ಭಯಪಡುವ ಅಗತ್ಯವಿಲ್ಲ, ಮನೆಮದ್ದಿನಿಂದಲೇ ಶಮನ ಮಾಡಿಕೊಳ್ಳಬಹುದು.
ಸೋಂಪಿನ ಕಾಳುಗಳು
ಊಟದ ಬಳಿಕ ದಿನನಿತ್ಯ ಸೋಂಪಿನ ಕಾಳುಗಳನ್ನು ಸೇವನೆ ಮಾಡುವುದರಿಂದ ಅಜೀರ್ಣವನ್ನು ಶಮನ ಮಾಡಿಕೊಳ್ಳಬಹುದಾಗಿದೆ. ಇದು ಹೊಟ್ಟೆ ಸೆಳೆತ, ವಾಕರಿಕೆ ಮತ್ತು ಉಬ್ಬುವಿಕೆಯನ್ನು ಸಹ ಸರಾಗಗೊಳಿಸುತ್ತದೆ.
ಸೋಂಪಿನ ಕಾಳುಗಳು ಫೆನ್ಕೋನ್ ಮತ್ತು ಎಸ್ಟ್ರಾಗೋಲ್ ಎಂಬ ತೈಲ ಸಂಯುಕ್ತಗಳನ್ನು ಹೊಂದಿದ್ದು ಅದು ಕರುಳಿನ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದೆ.
ಅಡುಗೆ ಸೋಡ
ಅಡುಗೆ ಸೋಡಾವು ಅಜೀರ್ಣವನ್ನು ಸರಿಪಡಿಸುತ್ತದೆ. ಅಲ್ಲದೆ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ನಿವಾರಣೆ ಮಾಡುತ್ತದೆ.
ಅದಕ್ಕಾಗಿ ನೀವು ಸುಮಾರು 100 ಮಿಲಿ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀಚಮಚ ಅಡುಗೆ ಸೋಡವನ್ನು ಮಿಶ್ರಣ ಮಾಡಿ ಕುಡಿಯಿರಿ. 24-ಗಂಟೆಗಳ ಅವಧಿಯಲ್ಲಿ 1/2 ಟೀಚಮಚಗಳಿಗಿಂತ ಹೆಚ್ಚು ಸೇವನೆ ಮಾಡಬೇಡಿ.
ಲಿಂಬು ಪಾನಕ
ಲಿಂಬು ನೀರು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. 1 ಚಮಚ ನಿಂಬೆ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ನೀವು ಊಟ ಮಾಡುವ ಮೊದಲು ಕುಡಿಯಿರಿ.
ನಿಂಬೆ ನೀರಿನ ಕ್ಷಾರೀಯ ಪರಿಣಾಮವು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಓಂಕಾಳು
ಅಜೀರ್ಣ, ಆಮ್ಲೀಯತೆ ಮತ್ತು ವಾಯುವನ್ನು ಗುಣಪಡಿಸಲು ಆಯುರ್ವೇದ ಮತ್ತು ಭಾರತೀಯ ಪದ್ಧತಿಯಲ್ಲಿ ಓಂಕಾಳು ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ.
ಓಂಕಾಳಿನ್ನು ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ ಸೋಸಿಕೊಂಡು, ಆ ನೀರನ್ನು ಕುಡಿಯಿರಿ. ಅಥವಾ ಬರಿ ಓಂಕಾಳಿನ ಬೀಜಗಳನ್ನು ಉಪ್ಪನ್ನು ಸೇರಿಸಿ ಅಗೆಯಿರಿ.
ಶುಂಠಿಯ ಬಳಕೆ
ಅಜೀರ್ಣಕ್ಕೆ ಅತ್ತುತ್ತಮ ಮನೆಮದ್ದು ಎಂದರೆ ಶುಂಠಿ. ಶುಂಠಿಯ ಜ್ಯೂಸ್ ಸೇವನೆ ಮಾಡಬಹುದು. ಅಥವಾ ಅಜೀರ್ಣವಾದರೆ ಶುಂಠಿಯ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಸೇವನೆ ಮಾಡಿ.
ಉತ್ತಮ ವಿಧಾನ ಎಂದರೆ ಊಟಕ್ಕೂ ಮುಂಚೆ ಶುಂಠಿಯನ್ನು ಚಿಟಿಕೆ ಉಪ್ಪನ್ನು ಸೇರಿಸಿ ಜಗಿದುಕೊಳ್ಳಿ. ನಂತರ ಅರ್ಧಗಂಟೆ ಬಿಟ್ಟು ಊಟ ಮಾಡಿ. ಇದರಿಂದ ಅಜೀರ್ಣವಾಗುವುದನ್ನು ತಡೆಯಬಹುದು.