ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆದ ಮಲಯಾಳಂನ ‘ಮಂಜುಮೇಲ್ ಬಾಯ್ಸ್’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಹ್ಯಾಟ್ಸ್ ಆಫ್ ಎಂದಿದ್ದಾರೆ. ‘ಮಂಜುಮೇಲ್ ಬಾಯ್ಸ್’ ಚಿತ್ರದಲ್ಲಿ ಕಣ್ಮಣಿ ಹಾಡು ಮುಖ್ಯ ಪಾತ್ರವಹಿಸಿದೆ. ‘ಗುಣ’ ಸಿನಿಮಾದ ಹಾಡನ್ನು ಈ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ‘ಗುಣ’ ಚಿತ್ರದ ಸಂಗೀತ ಸಂಯೋಜಕ ಇಳಯರಾಜ ಆರೋಪ ಮಾಡಿದ್ದಾರೆ.
1991ರಲ್ಲಿ ತೆರೆಕಂಡ ಗುಣ ಸಿನಿಮಾಗೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ..’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಸಖತ್ ಇಷ್ಟಟ್ಟಿದ್ದರು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ನೋಟಿಸ್ ನೀಡಿದ್ದಾರೆ. ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡಿನ ಹಕ್ಕು ನಮ್ಮದು ಎಂದು ಅವರು ಹೇಳಿದ್ದಾರೆ. ‘ಕಣ್ಮಣಿ ಹಾಡನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಇಳಯರಾಜ ಅವರು ಈ ಹಾಡಿನ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಸಂಗೀತ ಕೃತಿಗಳ ಮೇಲೆ ನೈತಿಕ ಹಕ್ಕುಗಳನ್ನು ಒಳಗೊಂಡಂತೆ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ. ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಸಂಗೀತ ಸಂಯೋಜಕರ ಅನುಮತಿ ಪಡೆಯಿರಿ ಅಥವಾ 15 ದಿನಗಳಲ್ಲಿ ಪರಿಹಾರವನ್ನು ಪಾವತಿಸುವಂತೆ ಜೊತೆಗೆ ಚಿತ್ರದಿಂದ ಹಾಡನ್ನು ತೆಗೆದು ಹಾಕುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ ಇಳಯರಾಜ ಪರ ವಕೀಲರು. ಎರಡು ಆಯ್ಕೆಯಲ್ಲಿ ಒಂದನ್ನು ಪಾಲಿಸದಿದ್ದರೆ ಅವರ ವಿರುದ್ಧ ನೋಟಿಸ್ ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.