ಈ ವರ್ಷ ತೆರೆಕಂಡ ಮಲಯಾಳಂ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೋಟಿ ಕೋಟಿ ಬಾಚಿಕೊಂಡಿರೋ ಈ ಸಿನಿಮಾದ ವಿರುದ್ಧ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ದೂರು ದಾಖಲಿಸಿದ್ದರು. ಈ ಸಿನಿಮಾದಲ್ಲಿ ಬಳಸಿರುವ ‘ಕಣ್ಮಣಿ..’ ಹಾಡಿನ ಹಕ್ಕು ನಮ್ಮದು ಎಂದು ವಾದಿಸಿದ್ದರು. ಕೋರ್ಟ್ನಲ್ಲಿ ಇಳಯರಾಜ ಅವರಿಗೆ ಜಯ ಆಗಿದೆ. ವರದಿಗಳ ಪ್ರಕಾರ ಇಳಯರಾಜ ಅವರಿಗೆ ಸಿನಿಮಾ ತಂಡ 60 ಲಕ್ಷ ರೂಪಾಯಿ ನೀಡಿದೆಯಂತೆ.
‘ಮಂಜುಮ್ಮೇಲ್ ಬಾಯ್ಸ್’ ಕಥೆ ಸಾಗೋದು ಗುಣ ಗುಹೆಯಲ್ಲಿ. ಹೀಗಾಗಿ, ‘ಗುಣ’ ಚಿತ್ರದಲ್ಲಿ ಬಳಕೆ ಆದ ‘ಕಣ್ಮಣಿ..’ ಸಾಂಗ್ನ ತಂಡದವರು ಬಳಕೆ ಮಾಡಿಕೊಂಡಿದ್ದರು. ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದಲೇ ಇಳಯರಾಜ ಅವರು ಕೋರ್ಟ್ನಲ್ಲಿ ಕೇಸ್ ಹಾಕಿ, ತಂಡದವರು ಎರಡು ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಇಳಯರಾಜ ಕೋರಿದ್ದರು. ಈಗ ‘ಮಂಜುಮ್ಮೇಲ್ ಬಾಯ್ಸ್’ ತಂಡದವರು 60 ಲಕ್ಷ ರೂಪಾಯಿ ಕೊಡಲು ಒಪ್ಪಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಕೋರ್ಟ್ನಲ್ಲಿ ಸಾಂಗ್ ಹಕ್ಕು ಪಡೆದಿದ್ದಾಗಿ ವಾದ ಮುಂದಿಟ್ಟಿದ್ದಾರೆ. ‘ನಾವು ಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ’ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳಯರಾಜ ಪರ ವಕೀಲರು, ‘ಇಳಯರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಹೊಂದಿದ್ದಾರೆ’ ಎಂದರು. ಹೀಗಾಗಿ, ಇಳಯರಾಜ ಅವರು ಈ ಹಾಡನ್ನು ಬಳಸಲು ‘ಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲ. ಈಗ ರಾಯಲ್ಟಿ ರೂಪದಲ್ಲಿ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಅನ್ನು ‘ಮಂಜುಮ್ಮೇಲ್ ಬಾಯ್ಸ್’ ತಂಡ ನೀಡಿದೆ.
ಈ ಮೊದಲು ‘ಕೂಲಿ’ ಸಿನಿಮಾ ತಂಡದ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ‘ವಾ ವಾ ಪಕ್ಕಮ್ ವಾ..’ ಹಾಡಿನ ಹಕ್ಕು ತಮ್ಮದು ಎಂದಿದ್ದರು. ಆದರೆ, ಈ ಸಾಂಗ್ನ ಹಕ್ಕು ಸೋನಿ ಬಳಿ ಇದೆ ಎಂಬುದು ಆ ಬಳಿಕ ತಿಳಿದಿತ್ತು. ಈ ಮೊದಲು ಕೂಡ ಇಳಯರಾಜ ಈ ರೀತಿಯ ಅನೇಕ ಕೇಸ್ಗಳನ್ನು ದಾಖಲಿಸಿದ್ದರು.