ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Elections 2023) ಹಿನ್ನೆಲೆ ಜಾರಿಯಾಗಿದ್ದ ನೀತಿ ಸಂಹಿತೆ(Code of Conduct) ಮುಗಿಯುತ್ತಿದ್ದಂತೆ ಅಧಿಕಾರಿಗಳಿಗೆ ಬಿಬಿಎಂಪಿ(BBMP) ಚಾಟಿ ಬೀಸಿದೆ. ಹೀಗಾಗಿ ಈಗ ಅಕ್ರಮವಾಗಿ ಎ ಖಾತ ಮಾಡಿ ಕೊಟ್ಟ ಅಧಿಕಾರಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಮಾರ್ಚ್ 29ರಂದು ಜಾರಿಯಾದ ನೀತಿ ಸಂಹಿತೆ ಮೇ 16ರಂದು ಮುಗಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ತಮ್ಮ ರೆಗ್ಯುಲರ್ ಕೆಲಸಗಳಿಗೆ ಮರಳಿದ್ದಾರೆ. ಸದ್ಯ ಅಕ್ರಮವಾಗಿ ಎ ಖಾತಗಳ ವಿಚಾರದಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್(Tushar Girinath) ಮುಂದಾಗಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ದಾಖಲಾದ ಬಿ ಖಾತ ಟೂ ಎ ಖಾತ ಆಸ್ತಿಗಳ ಬಗ್ಗೆ ವಿವರಣೆ ಕೇಳಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ, ಮಹಾದೇವಪುರ, ಯಲಹಂಕ, ಆರ್ಆರ್ ನಗರ, ದಾಸರಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಎ ಖಾತೆಗಳು ದಾಖಲಾಗಿವೆ. ಅಧಿಕಾರಿಗಳು ಎರಡು ತಿಂಗಳಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ ಬರೋಬರಿ 600ಕ್ಕೂ ಹೆಚ್ಚಿನ ಬಿ ಖಾತ ಆಸ್ತಿಗಳನ್ನು ಎ ಖಾತಗೆ ವರ್ಗಾವಣೆ ಮಾಡಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ
ಯಾವುದೇ ಫೀಸ್ ಪಡೆಯದೆ. ಬಿ ಖಾತ ಟೂ ಎ ಖಾತ ಮಾಡಲಾಗಿದೆ. ಹೀಗಾಗಿ ಜೆಸಿ ಜಯರಾಮ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅಕ್ರಮವಾಗಿ ಮಾಡಿರುವ ಖಾತಗಳ ಬಗ್ಗೆ ಸಮಿತಿ ವರದಿ ನೀಡಲಿದೆ. ಸಮಿತಿಗೆ ಈಗಾಗಲೇ ಡೆಡ್ ಲೈನ್ ನೀಡಲಾಗಿದೆ. ನಿನ್ನೆ(ಮೇ 16) ಸಭೆ ನಡೆಸಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ನಗರದ ಹೊರ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಎ ಖಾತ ಆಗಿರುವ ಮಾಹಿತಿ ಬಂದಿದೆ.
ಈ ತಿಂಗಳಲ್ಲಿ ಅಧಿಕಾರಿಗಳಲ್ಲಿ ಈ ಬಗ್ಗೆ ಸ್ವಯಂ ಮಾಹಿತಿ ನೀಡಿ ಸರಿ ಮಾಡಿಕೊಡುವಂತೆ ಆದೇಶಿಸಲಾಗಿದೆ. ಇಲ್ಲ ಅಂದ್ರೆ ತನಿಖೆ ಆದಾಗ ಶಿಕ್ಷೆ ಅನುಭವಿಸಬೇಕಾಗುತ್ತೆ. ಅಧಿಕಾರಿಗಳು ಶಾಮೀಲ್ ಆಗದಿದ್ರೆ ಇದು ಆಗಲು ಸಾಧ್ಯವಿಲ್ಲ. ತನಿಖೆಯಲ್ಲಿ ಯಾವ ಅಧಿಕಾರಿಗಳು ಶಾಮಿಲಾಗಿದ್ದಾರೆ, ಯಾವ ವಲಯಗಳಲ್ಲಿ ಎಷ್ಟು ಅಕ್ರಮ ಖಾತೆ ಮಾಡಿಕೊಡಲಾಗಿದೆ ಎಲ್ಲವು ಬೆಳಕಿಗೆ ಬರಲಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.