ಬೆಂಗಳೂರು:- ನಗರದ ಯಲಹಂಕದಲ್ಲಿ 85 ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿದೆ.
ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಯಲಹಂಕದಲ್ಲಿ 2.75 ಎಕರೆ ಪ್ರದೇಶದಲ್ಲಿದ್ದ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಬಿಬಿಎಂಪಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಬಿಬಿಎಂಪಿ ಹೇಳಿಕೆ ಪ್ರಕಾರ, ಅತಿಕ್ರಮಣದಾರರು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡು ವಾಣಿಜ್ಯ ಸಂಸ್ಥೆಗಳನ್ನೂ ನಡೆಸುತ್ತಿದ್ದರು.
140 ಪೊಲೀಸ್ ಸಿಬ್ಬಂದಿ ಮತ್ತು 70 ಕಾರ್ಮಿಕರು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ನಾಲ್ಕು ಜೆಸಿಬಿಗಳು ಮತ್ತು 12 ಟ್ರ್ಯಾಕ್ಟರ್ಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.