ಇತ್ತೀಚೆಗೆ ಕಾಡಾನೆ ಸೆರೆ ಹಿಡಿಯುವ ವೇಳೆ ದುರಂತ ಸಾವಿಗೀಡಾಗಿದ್ದ ದಸರಾ ಆನೆ ಅರ್ಜುನನ ಸಮಾಧಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಭಿಮಾನಿ ವಿರುದ್ಧ ಪ್ರಕರಣ ದಾಖಲಿಸಿದೆ.
ಅರಣ್ಯ ಕಾಯಿದೆ 1963 ಮತ್ತು 1969 ರ ಅಡಿಯಲ್ಲಿ ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಹೆಚ್.ಡಿ.ಕೋಟೆ ನಿವಾಸಿ ನವೀನ್ ವಿರುದ್ಧ ಯಸಳೂರು ವಲಯ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಸಕಲೇಶಪುರ ತಾಲೂಕಿನ ದಬ್ಬೆಕಟ್ಟೆ ಮೀಸಲು ಅರಣ್ಯದಲ್ಲಿ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ನವೀನ್ ಮತ್ತು ಆತನ ನೇತೃತ್ವದಲ್ಲಿ ಹಲವರು ಅತಿಕ್ರಮ ಪ್ರವೇಶ ಮಾಡಿದ್ದರು. ಅಲ್ಲದೆ ಅರ್ಜುನ ಆನೆ ಸಮಾಧಿ ಭೂಮಿಯನ್ನು ಅಗೆದು ಕಲ್ಲಿನ ಸ್ಲಾಬ್ಗಳಿಂದ ಬೇಲಿ ಹಾಕಿ ಸಮಾಧಿಯನ್ನು ವಿರೂಪಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಸಮಾಧಿ ಸುತ್ತ ಬೇಲಿ ಹಾಕಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳೀಯರು ನೀಡಿದ್ದ ದೂರಿನ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.