ದಾವಣಗೆರೆ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಾಖಲೆಗಳಿಲ್ಲದೇ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ, ನಾನಾ ವಸ್ತುಗಳು ಹಾಗೂ ನಗದು ಸೇರಿ ಒಟ್ಟು 93.42 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿಏಪ್ರಿಲ್ 8 ರಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2.53 ಲಕ್ಷ ರೂ. ಮೌಲ್ಯದ 627 ಲೀಟರ್ ಮದ್ಯ, 42.20 ಲಕ್ಷ ರೂ. ನಗದು, 9 ಲಕ್ಷ ರೂ. ಮೌಲ್ಯದ ಹಾಲಿನ ಕ್ಯಾನ್, 39 ಲಕ್ಷ ಮೌಲ್ಯದ 64 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಕ್ರಮ ತಡೆಗೆ ಇರುವ ಸಿ-ವಿಜಿಲ್ ಆ್ಯಪ್ ಮೂಲಕ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಈವರೆಗೆ 15 ದೂರುಗಳು ದಾಖಲಾಗಿದೆ ಎಂದರು.
ಜಿಲ್ಲೆಯಲ್ಲಿಈವರೆಗೆ 14,32,960 ಜನರು ಮತದಾರರಿದ್ದು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಅವಧಿಯ ಕೊನೆಯ ದಿನದವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ. ಆದರೆ, ಏಪ್ರಿಲ್ 11ವರೆಗೆ ಸಲ್ಲಿಸಿದ್ದ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 27586 ಮತದಾರರರಿದ್ದು, ಇವರಲ್ಲಿ ಈಗಾಗಲೇ 24463 ಮತದಾರರಿಗೆ ಮನೆಯಿಂದಲೇ ಮತ ಹಾಕಲು 12ಡಿ ನಮೂನೆ ತಲುಪಿಸಲಾಗಿದೆ. ಇನ್ನು ಒಟ್ಟು 19427 ವಿಶೇಷಚೇತನ ಮತದಾರರಲ್ಲಿ 19427 ಮತದಾರರಿಗೆ ಮನೆಯಲ್ಲಿ ಮತ ಚಲಾಯಿಸಲು ಬೇಕಾದ 12ಡಿ ನಮೂನೆ ನೀಡಲಾಗಿದೆ ಎಂದರು.
ಪೂರ್ವಾನುಮತಿ ಕಡ್ಡಾಯ
ಮುದ್ರಣ ಮಾಧ್ಯಮ ಹೊರತುಪಡಿಸಿ ಉಳಿದೆಲ್ಲ ವಿದ್ಯುನ್ಮಾನ ಮಾಧ್ಯಮದವರು ಚುನಾವಣಾ ಪ್ರಚಾರ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿಜಾಹೀರಾತು ಪ್ರಕಟಿಸಲು ಅವಕಾಶವಿಲ್ಲ. ನಿರಂತರವಾಗಿ ಒಂದೇ ಅಭ್ಯರ್ಥಿ ಅಥವಾ ಪಕ್ಷದ ಪರ ಬರುವ ಸುದ್ದಿಗಳನ್ನು ಹಾಗೂ ಹಲವು ಪತ್ರಿಕೆಗಳಲ್ಲಿಪ್ರಕಟವಾಗುವ ಒಂದೇ ರೀತಿಯ ಸುದ್ದಿಗಳನ್ನು ಜಾಹೀರಾತು ಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.
22 ಜನ ಗಡಿಪಾರು!
ಜಿಲ್ಲೆಯಲ್ಲಿ ಸಮಾಜಘಾತುಕ ಕೆಲಸಗಳಲ್ಲಿ ಭಾಗಿಯಾಗಿದ್ದ 22 ಜನರನ್ನು ರೌಡಿಲಿಸ್ಟ್ನಲ್ಲಿ ಸೇರಿಸಿದ್ದು, ಈಗಾಗಲೇ 13 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇನ್ನುಳಿದವರನ್ನು ಮೂರ್ನಾಲ್ಕು ದಿನಗಳಲ್ಲಿ ಗಡಿಪಾರು ಮಾಡಲಾಗುವುದು. ದಾವಣಗೆರೆಯಿಂದ ಚಾಮರಾಜನಗರ, ಗುಲ್ಬರ್ಗಾ ಸೇರಿದಂತೆ ಹಲವೆಡೆ ಗಡಿಪಾರು ಮಾಡಲಾಗಿದೆ. ಅವರೆಲ್ಲರೂ ಆಯಾ ಸ್ಥಳೀಯ ಠಾಣೆಗೆ ಹಾಜರಾಗಿ ದಿನವೂ ಸಹಿ ಹಾಕಬೇಕು. ಇದನ್ನು ಉಲ್ಲಂಘಿಘಿಸುವವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು. ಈ ವೇಳೆ ವಾರ್ತಾಧಿಕಾರಿ ರಂಗನಾಥ್, ಕೂಟದ ಅಧ್ಯಕ್ಷ ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ವರದರಾಜ್, ಖಜಾಂಚಿ ಮಧುನಾಗರಾಜ್ ಹಾಜರಿದ್ದರು.