ಅಕ್ರಮ ಹಣ ಸಂದಾಯ ಪ್ರಕರಣಕ್ಕಂ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾಗೆ ಹಿನ್ನಡೆ ಆಗಿದ್ದು ಕರ್ನಾಟಕ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ವೀಣಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಜಾಗೊಳಿಸಿದೆ. ಅದರಂತೆ ಎಸ್ಎಫ್ಐಎ ತನಿಖೆ ಮುಂದುವರಿಸಲಿದೆ.
ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಅಂಶ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ತಿಳಿದುಬಂದಿತ್ತು. ಅಲ್ಲದೆ, ಈ ಹಣದ ಪೈಕಿ 1.72 ಕೋಟಿ ರೂಪಾಯಿಗಳನ್ನು ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದಲ್ಲಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು.
ಯಾವುದೇ ಸೇವೆ ನೀಡದಿದ್ದರೂ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಎಸ್ಎಫ್ಐಒ ಗಮನಕ್ಕೆ ತಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಎಫ್ಐಒ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ವೀಣಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೇರಳ ಕರಾವಳಿಯುದ್ದಕ್ಕೂ ಕೊಚ್ಚಿನ್ ಮಿನರಲ್ಸ್ ಕಡಲತೀರದ ಮರಳು ಗಣಿಗಾರಿಕೆಯಲ್ಲಿ ಮರಳಿನ ತೊಡಗಿರುವುದರಿಂದ ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ಎಸ್ಎಫ್ಐಒ ತನಿಖೆಗೆ ಆದೇಶಿಸಿದೆ. ಕೇರಳ ರಾಜ್ಯದ ವಿವಿಧ ರಾಜಕಾರಣಿಗಳು ಮತ್ತು ವೀಣಾ ಒಡೆತನದ ಇಎಸ್ಪಿಎಲ್ ಸೇರಿದಂತೆ ಇತರ ಕೆಲವು ಸಂಸ್ಥೆಗಳಿಗೆ 135 ಕೋಟಿ ರೂಪಾಯಿಗಳಷ್ಟು ಅಕ್ರಮವಾಗಿ ಪಾವತಿ ಮಾಡಲಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಪೀಠಕ್ಕೆ ತಿಳಿಸಿದರು.