ಧಾರವಾಡ: ಶೃಂಗೇರಿ ಕೊಡಲಿ ಮಠದ ಪೀಠಾಧಿಪತಿ ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಅವರು ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಠದ ಭಕ್ತ ಅಮೃತೇಶ್ವರ ಮಹಾರಾಜರು ಮಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧಾರವಾಡ, ಗದಗ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿರುವ ಮಠಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಕೊಡಲಿ ಶೃಂಗೇರಿ ಮಹಾಸಂಸ್ಥಾನದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜಗದ್ಗುರು ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದರು.
ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಅವರನ್ನು ಕೆಳಗಿಳಿಸಿ ನೂತನ ಪೀಠಾಧಿಪತಿಯನ್ನು ನೇಮಕ ಮಾಡಬೇಕು. ಈ ಮಠ ಚಿತ್ರದುರ್ಗ, ದಾವಣಗೆರೆ, ಹಾನಗಲ್, ಗದಗ, ಊದಗಟ್ಟಿ ಸೇರಿದಂತೆ ಇತರ ಕಡೆ ಹಲವಾರು ಶಾಖಾ ಮಠಗಳನ್ನು ಹೊಂದಿದೆ. ಈ ಮಠಕ್ಕೆ ರಾಜ್ಯದಾದ್ಯಂತ ಭಕ್ತರು ನೀಡಿದ 36 ಎಕರೆ ಜಮೀನು ಇದೆ. ಪ್ರಸ್ತುತ ಪೀಠಾಧಿಪತಿ ಈ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ಪೀಠಾಧಿಪತಿ ಮಠದಲ್ಲಿ ಇರದೇ ನಾಪತ್ತೆಯಾಗಿದ್ದಾರೆ. ಮಠದಲ್ಲಿ ನಿತ್ಯ ಪೂಜೆ, ಅನುಷ್ಠಾನ ಮತ್ತು ಭೋಜನ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಭಕ್ತರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಈ ಮಠದ ಅವ್ಯವಸ್ಥೆಯನ್ನು ಸರಿಪಡಿಸಲು ಇತ್ತೀಚೆಗೆ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಭಕ್ತರು ಸಭೆ ನಡೆಸಿದ್ದರು. ಸಭೆಯಲ್ಲಿ ತಾತ್ಕಾಲಿಕ ಮಂಡಳಿ ರಚನೆ ಮಾಡಲಾಗಿತ್ತು. ಅದರನ್ವಯ ಮಠಕ್ಕೆ ಹೊಸ ಪೀಠಾಧಿಪತಿಯನ್ನು ನೇಮಕ ಮಾಡಬೇಕು. ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಸ್ವಯಂ ಪ್ರೇರಣೆಯಿಂದ ಕೆಳಗಿಳಿಯಬೇಕು. ಈಗಾಗಲೇ ಈ ಪೀಠಾಧಿಪತಿಗಳು ಗದಗ ಜಿಲ್ಲೆಯ ವೆಂಕಟಾಪುರ ಹಾಗೂ ಧಾರವಾಡದಲ್ಲಿನ ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದರು.