ಬೆಂಗಳೂರು:- ಕೋಟ್ಯಾಂತರ ಮೌಲ್ಯದ ಕೊಕೇನ್ ಜಪ್ತಿ ಮಾಡಿದ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಜರುಗಿದೆ.
ದುಬೈನಿಂದ ಬೆಂಗಳೂರಿಗೆ ಬಂದಿದ್ದ ವೆನೆಜುವೆಲಾದ ಪ್ರಯಾಣಿಕ, ದೇಹದೊಳಗೆ ಕೊಕೇನ್ ಮರೆಮಾಚಿ ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ. ಅನುಮಾನಗೊಂಡ ಡಿಆರ್ಐ ಅಧಿಕಾರಿಗಳು, ಆರೋಪಿಯನ್ನು ಸ್ಕ್ಯಾನಿಂಗ್ ಮಾಡಿಸಿದ್ದರು. ಈ ವೇಳೆ ದೇಹದಲ್ಲಿ ಬರೊಬ್ಬರಿ 9.2 ಕೋಟಿ ಮೌಲ್ಯದ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್ ಪತ್ತೆಯಾಗಿದ್ದು, ಮರೆಮಾಚಿದ್ದ ಕ್ಯಾಪ್ಸುಲ್ಗಳನ್ನು ಅಧಿಕಾರಿಗಳು ಹೊರತೆಗೆಸಿದ್ದಾರೆ. ಈ ಕುರಿತು NDPS ಕಾಯ್ದೆ 1985ರ ಅಡಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇನ್ನು ಜ.05 ರಂದು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬರೊಬ್ಬರಿ 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 12 ಜನ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇವರಿಂದ 2.86 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದರು.