ಬೆಂಗಳೂರು ;- ಆರ್ ಆರ್ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮತ್ತಿಕೆರೆಯ ಜೆ.ಪಿ ಪಾರ್ಕ್ ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ ಅವರು, ಆರ್ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಹಳ್ಳಿ ಕೆರೆ, ಹೊಸಕೆರೆ, ಜೆಪಿ ಪಾರ್ಕ್ ಅಭಿವೃದ್ಧಿ ಹೆಸರಿನಲ್ಲಿ ಕೆರೆ ಕಣ್ಮರೆ ಈಜುಕೊಳ ಮರು ನಿರ್ಮಾಣ ಹಾಗೂ ಕೆಲವು ಉದ್ಯಾನಗಳ ಅಭಿವೃದ್ಧಿ ಮಾಡುವ ನೆಪದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳನ್ನು ಜನರಿಗೆ ತಿಳಿಸಲು ಸೂಕ್ತ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಆರ್ಆರ್ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮ ನಡೆಸಿರುವ ಬಿಜೆಪಿ ಶಾಸಕರು ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದು ಜನರಿಗೆ ಗೊತ್ತಾಗಲಿ. ಈ ಸಂಬಂಧ ಅಕ್ರಮಗಳೆಲ್ಲವನ್ನು ಬಯಲಿಗೆಳೆಯುತ್ತೇವೆ ಎಂದರು.
ಹೊಸಕೆರೆ ಹಳ್ಳಿ ಬಳಿ ಬೇರೊಬ್ಬರ ಹೆಸರಿನಲ್ಲಿ (ಬೇನಾಮಿ) ಶಾಸಕರು ಜಮೀನು ಖರೀದಿ ಮಾಡಿದ್ದಾರೆ ಎಂದು ಹೆಸರು ಹೇಳದೇ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅವರು ಕಿಡಿ ಕಾರಿದರು. ತಾವು ಖರೀದಿಸಿದ ಜಮೀನಿಗೆ ತೆರಳಲು ಕೆರೆ ನಡುವೆ ರಸ್ತೆ ನಿರ್ಮಿಸಿದ್ದಾರೆ. ಹೀಗೆ ಕೆರೆ ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ ಹೊಡೆಯಲಾಗಿದೆ ಎಂದು ಅವರು ತಿಳಿಸಿದರು.