ಟಾಲಿವುಡ್ ನ ಸ್ಟಾರ್ ನಟ ಪವನ್ ಕಲ್ಯಾಣ್ ಸಿನಿಮಾಗಳಿಗೆ ಬ್ರೇಕ್ ಪಡೆದುಕೊಂಡು ಫುಲ್ ಟೈಮ್ ರಾಜಕೀಯದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೇಗಾದರೂ ಮಾಡಿ ಜನಸೇನಾ ಪಕ್ಷವನ್ನು ಗೆಲ್ಲಿಸಲೇ ಬೇಕೆಂಬ ನಿರ್ಧಾರ ತೆಗೆದುಕೊಂಡಿರುವ ನಟ ರಾಜ್ಯದಾದ್ಯಂತ ಯಾತ್ರೆ ಪ್ರಾರಂಭಿಸಿದ್ದು, ಯಾತ್ರೆಗೆ ವಾರಾಹಿ ಯಾತ್ರೆ ಎಂದು ಹೆಸರಿಟ್ಟಿದ್ದಾರೆ. ಆದರೆ ಇದೀಗ ಅನಾರೋಗ್ಯದ ಹಿನ್ನೆಲೆಯಲ್ಲಿ ಯಾತ್ರೆಗೆ ಅಲ್ಪ ವಿರಾಮ ಹಾಕಿರುವ ನಟ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬಿಡುವಿಲ್ಲದ ಯಾತ್ರೆಯಿಂದ ಧಣಿದಿರುವ ಪವನ್ ಕಲ್ಯಾಣ್ ಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ನಿನ್ನೆ ಪವನ್ ಕಲ್ಯಾಣ್ ಯಾತ್ರೆ ಭೀಮವರಂ ತಲುಪಿ ಅಲ್ಲಿನ ನಾಯಕರು, ಮುಖಂಡರುಗಳೊಟ್ಟಿಗೆ ಚರ್ಚೆ ನಡೆಸಬೇಕಿತ್ತು. ಆದರೆ ಪವನ್ ಕಲ್ಯಾಣ್ ಆರೋಗ್ಯದಲ್ಲಿ ವ್ಯತ್ಯಯ ಆಗಿರುವ ಕಾರಣ ಭೀಮವರಂ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅಭಿಮಾನಿಗಳು ಆತಂಕ ಪಡುವಂಥಹದ್ದೇನೂ ಇಲ್ಲ, ಆದಷ್ಟು ಬೇಗ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದು ಅವರ ಯಾತ್ರೆ ಭೀಮವರಂ ತಲುಪಲಿದೆ ಎಂದು ಜನಸೇನಾ ಪಕ್ಷ ಮುಖಂಡರು ತಿಳಿಸಿದ್ದಾರೆ.
ಪವನ್ ಕಲ್ಯಾಣ್ರ ವಾರಾಹಿ ಯಾತ್ರೆ ರಾಜ್ಯವೆಲ್ಲ ಸಂಚರಣೆ ಮಾಡಲಿದೆ. ಜೂನ್ 14ರಂದು ಅನ್ನವರಂನಲ್ಲಿ ವಾರಾಹಿ ಯಾತ್ರೆ ಆರಂಭವಾಗಿದ್ದು ಭೀಮವರಂ ತಲುಪಿ ಯಾತ್ರೆ ಮುಗಿಯಲಿದೆ. ಇದು ವಾರಾಹಿ ಯಾತ್ರೆಯ ಮೊದಲ ಹಂತವಾಗಿದ್ದು ಒಟ್ಟು ಮೂರು ಹಂತದಲ್ಲಿ ಯಾತ್ರೆಗಳನ್ನು ಮಾಡಿ ರಾಜ್ಯ ಪರ್ಯಟನೆ ಮಾಡಲಿದ್ದಾರೆ ಪವನ್ ಕಲ್ಯಾಣ್. ಆದರೆ ಮೊದಲ ಯಾತ್ರೆ ಇನ್ನೇನು ಗಮ್ಯ ತಲುಪುವ ಹೊತ್ತಿನಲ್ಲಿಯೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಕೊಂಚ ಮಟ್ಟಿನ ವಿಶ್ರಾಂತಿಗೆ ಪವನ್ ಕಲ್ಯಾಣ್ ಒಳಗಾಗಿದ್ದಾರೆ.