ಬೆಂಗಳೂರು: ” ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ ಕೆಂಪೇಗೌಡರ ರಕ್ತದ ಗುಣ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕ ಡಿಕೆ ಶಿವಕುಮಾರ್ ಇದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.
“ಇದೆಲ್ಲವೂ ಹಳೇ ವಿಡಿಯೋ ಎಂದು ಸ್ವತಃ ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯುತ್ತಾನೆ. ಈ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ನಾಯಕ ದೇವರಾಜೇಗೌಡ ಅವರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಮಾಧ್ಯಮಗಳಿಗೂ ತಿಳಿಸಿದ್ದಾರೆ. ಹೀಗಿರುವಾಗ ನನಗೂ ಈ ಪ್ರಕರಣಕ್ಕೂ ಏನು ಸಂಬಂಧ ” ಎಂದು ಪ್ರಶ್ನಿಸಿದರು.