ಪಾಕಿಸ್ತಾನ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಆದಷ್ಟು ಬೇಗ ತಮ್ಮನ್ನು ಜೈಲಿನಿಂದ ಹೊರಗೆ ಕರೆಸುವಂತೆ ವಕೀಲರಿಗೆ ಮೊರೆ ಇಟ್ಟಿದ್ದಾರೆ. ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಕಾರಾಗೃಹದಲ್ಲಿ ಇರುವ ಇಮ್ರಾನ್ ಖಾನ್, ತನಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಬೆಳಗ್ಗೆ ಹೊತ್ತು ಸೊಳ್ಳೆ ಕಾಟ, ರಾತ್ರಿ ಹೊತ್ತು ತಿಗಣೆ ಕಾಟದಿಂದ ಬೇಸತ್ತು ಹೋಗಿದ್ದೇನೆ ಎಂದು ವಕೀಲರ ಬಳಿ ಅಳಲು ತೋಡಿಕೊಂಡಿರುವ ಇಮ್ರಾನ್ ಖಾನ್, ಆದಷ್ಟು ಬೇಗ ತಮ್ಮ ಜಾಮೀನಿಗೆ ವ್ಯವಸ್ಥೆ ಮಾಡಿ ಜೈಲಿನಿಂದ ಬಿಡುಗಡೆ ಆಗುವಂತೆ ಮಾಡಿ ಎಂದು ಕೋರಿದ್ದಾರೆ.
ಇಮ್ರಾನ್ ಖಾನ್ ಪ್ರಧಾನ ಮಂತ್ರಿ ಆಗಿದ್ದ ವೇಳೆ ತಮ್ಮ ಕಚೇರಿಗೆ ಸಿಕ್ಕ ಉಡುಗೊರೆಗಳನ್ನು ಸರ್ಕಾರದ ಖಜಾನೆಗೆ ಒಪ್ಪಿಸದೆ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಮ್ರಾನ್ ಖಾನ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ನಿರ್ಬಂಧ ಹೇರಿತ್ತು.
ಈ ಪ್ರಕರಣದ ಅಡಿ ಜೈಲು ಪಾಲಾಗಿರುವ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಕುಖ್ಯಾತ ಕಾರಾಗೃಹದಲ್ಲಿ ಇಡಲಾಗಿದೆ. ಈ ಕಾರಾಗೃಹವು ಕೈದಿಗಳಿಗೆ ಅತಿ ಹೆಚ್ಚು ನಿರ್ಬಂಧಗಳನ್ನು ಹೇರುವ ಮೂಲಕವೇ ಕುಖ್ಯಾತಿಗೆ ಪಾತ್ರವಾಗಿದೆ.
ಕಾರಾಗೃಹದಲ್ಲಿ ಉಗ್ರರನ್ನು ಬಂಧಿಸಿ ಇಡಲಾಗುವ ಕೋಣೆಯಲ್ಲಿ ಇಮ್ರಾನ್ ಖಾನ್ ಅವರನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಅಟ್ಟೋಕ್ ಕಾರಾಗೃಹದಲ್ಲಿ ಕೈದಿಗಳನ್ನು ಭೇಟಿ ಮಾಡಲು ಹೊರಗಿನವರಿಗೆ ಸುಲಭವಾಗಿ ಅವಕಾಶ ಸಿಗೋದೇ ಇಲ್ಲ. ಜೊತೆಗೆ ಕೈದಿಗಳಿಗೆ ಮೂಲ ಸೌಕರ್ಯಗಳೂ ಸಿಗೋದಿಲ್ಲ ಎಂಬ ಆರೋಪಗಳಿವೆ.