ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರವಾಗಿ ಬ್ಯಾಟ್ ಬೀಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 2024ರ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಕಾಯಿದೆ ಜಾರಿ ಮಾಡುವ ಉತ್ಸಾಹದಲ್ಲಿದ್ದಾರೆ. ದೇಶದಲ್ಲಿ ಒಂದು ಕಾನೂನಿನ ಅಗತ್ಯತೆ ಬಗ್ಗೆ ಒತ್ತಿ ಹೇಳಿರುವ ಪ್ರಧಾನಿ ಮೋದಿ ಅವರು, ನಮ್ಮ ಸರಕಾರ ಜನರ ಸಂತುಷ್ಟೀಕರಣದ ಹಾದಿಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಚುನಾವಣೆಗೆ ಇನ್ನೊಂದು ವರ್ಷವಿರುವಾದ ಏಕಾಏಕಿ ಏಕರೂಪ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪ ಮಾಡಿದ ಪ್ರಧಾನಿ ನಡೆಯಿಂದ ಪ್ರತಿಪಕ್ಷಗಳು ಅಡಕತ್ತರಿಯಲ್ಲಿ ಸಿಲುಕಿವೆ. ಕೆಲವು ಪಕ್ಷಗಳು ಬಹಿರಂಗವಾಗಿಯೇ ವಿರೋಧಿಸಿದ್ದರೆ,
ಕೆಲವು ಪಕ್ಷಗಳು ತಾತ್ವಿಕ ಬೆಂಬಲ ನೀಡಿವೆ. ಕೆಲವು ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. ಎಲ್ಲಾ ಧರ್ಮಗಳ ಸಹಮತ ಪಡೆದುಕೊಂಡು ಕಾನೂನು ಜಾರಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ಆಯೋಗ ಜನಾಭಿಪ್ರಾಯಗಳನ್ನು ಆಹ್ವಾನಿಸಿದೆ. ಆದರೆ, ರಾಜಕೀಯ ಒಮ್ಮತ ಮೂಡಿಸುವುದು ಸರಕಾರಕ್ಕೆ ಅಷ್ಟು ಸುಲಭದ ಕೆಲಸವಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಬಹತೇಕ ನಾಯಕರು ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಸತ್ನಲ್ಲಿ ಮಸೂದೆಗೆ ಕಾಯಿದೆಯ ಸ್ವರೂಪ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿದೆ.
ರಾಜ್ಯಸಭೆಯಲ್ಲಿ ಬೇಕಿದೆ ಬಲ
ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಸಂಸತ್ ಎರಡು ಸದನಗಳಲ್ಲಿ ಪಾಸ್ ಮಾಡಿಕೊಳ್ಳುವುದು ಸರಕಾರದ ಮುಂದಿರುವ ಸವಾಲು. ಲೋಕಸಭೆಯಲ್ಲಿ ಸರಕಾರಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಮೊದಲ ಹರ್ಡಲ್ಸ್ ಸುಲಭವಾಗಿಯೇ ದಾಟುತ್ತದೆ. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಿದೆ. ಇಲ್ಲಿ ಅನ್ಯಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆಯ ದಾರಿ ಸುಲಭಗೊಳಿಸಲು ಸರಕಾರ ಮುಂದಾಗಬೇಕಿದೆ.
ರಾಜ್ಯಸಭೆ ಸದಸ್ಯರ ಸಂಖ್ಯೆ – 237
ಸದ್ಯ ರಾಜ್ಯಸಭೆ 237 ಸದಸ್ಯ ಬಲ ಹೊಂದಿದೆ. ಮಸೂದೆಯನ್ನು ಅಂಗೀಕರಿಸಲು ಬೇಕಿರುವ ಮ್ಯಾಜಿಕ್ ಸಂಖ್ಯೆ 119. ಬಿಜೆಪಿ ಮತ್ತದರ ಮಿತ್ರಪಕ್ಷಗಳು, ನಾಮ ನಿರ್ದೇಶಿತ ಸದಸ್ಯರು ಸೇರಿದರೂ (109) ಸರಕಾರಕ್ಕೆ 10 ಸ್ಥಾನಗಳ ಕೊರತೆ ಕಾಡಲಿದೆ. ಹೀಗಾಗಿ ಬಿಜೆಡಿ, ಆಪ್, ಬಿಆರ್ಎಸ್ ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಪಡೆದುಕೊಂಡು ಮಸೂದೆಯನ್ನು ಪಾಸ್ ಮಾಡಿಕೊಳ್ಳುವುದು ಸರಕಾರ ಉದ್ದೇಶವಾಗಿದೆ.
ಪಕ್ಷಗಳ ಬಲಾಬಲ
- ಬಿಜೆಪಿ – 92
- ಕಾಂಗ್ರೆಸ್ – 31
- ಟಿಎಂಸಿ – 12
- ಆಪ್ – 10
- ಡಿಎಂಕೆ – 10
- ಬಿಜೆಡಿ – 09
- ವೈಎಸ್ಆರ್ಪಿ- 09
- ಬಿಆರ್ಎಸ್ – 07
- ಆರ್ಜೆಡಿ – 06
- ಜೆಡಿಯು- 05
- ಎಐಎಡಿಎಂಕೆ- 04
- ಎನ್ಸಿಪಿ – 04
- ಇತರೆ – 28
119 ಗುರಿಯತ್ತ ಬಿಜೆಪಿ ಚಿತ್ತ
92 ಸದಸ್ಯರನ್ನು ಹೊಂದಿರುವ ಬಿಜೆಪಿ ಮಿತ್ರ ಪಕ್ಷ ಎಐಎಡಿಎಂಕೆ 4 ಹಾಗೂ ಇತರೆ ಪಕ್ಷಗಳ 7 ಸದಸ್ಯರ ಬೆಂಬಲವಿದೆ. ಒಬ್ಬ ಪಕ್ಷೇತರ ಹಾಗೂ ಐವರು ನಾಮಿರ್ದೇಶಿತ ಸದಸ್ಯರು ಎನ್ಡಿಎ ಮೈತ್ರಿ 109 ಸದಸ್ಯರ ಬೆಂಬಲವಿದೆ. ಬಿಜೆಪಿ ಸರಕಾರದ ಹಲವು ಮಸೂದೆ ಬೆಂಬಲಿಸಿರುವ ಒಡಿಶಾದ ನವೀನ್ ಪಟ್ನಾಯಕ್ ಅವರ ಬಿಜೆಡಿಯ 9 ಸದಸ್ಯರು ಬೆಂಬಲಿಸಿದರೂ ಒಂದು ಮತ ಕಡಿಮೆಯಾಗಲಿದೆ. ಬಿಜೆಪಿ ಬೆಂಬಲಿಸಿಕೊಂಡು ಬಂದಿದ್ದ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿಯ ವೈಎಸ್ಆರ್ಪಿ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ನೀಡಲು ನಿರಾಕರಿಸಿದೆ. ಹೀಗಾಗಿ ಸರಕಾರಕ್ಕೆ ಅನ್ಯಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ.